ಮುಸ್ಲಿಮರ ಸ್ಮಶಾನ ಭೂಮಿಗೆ ಜಮೀನು ಮಂಜೂರು: ಮಾಹಿತಿ ಒದಗಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಮುಸ್ಲಿಮರ ಸ್ಮಶಾನ ಭೂಮಿಗೆ ಜಮೀನು ಮಂಜೂರು ಆಗಿರುವ ಹಿನ್ನಲೆಯನ್ನು ಒದಗಿಸಲು ಕರ್ನಾಟಕ ಹೈಕೋರ್ಟ್ ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಗ್ರಾಮದಲ್ಲಿನ ಪುರಾತನ ಕಲ್ಯಾಣಿ ಮತ್ತು ಹಲವು ವರ್ಷಗಳ ಹಳೆಯ 11 ಮರಗಳಿರುವ 1.26 ಎಕರೆ ಜಮೀನನ್ನು ಮುಸ್ಲಿಮರ ಸ್ಮಶಾನ ಭೂಮಿಗೆ ಮಂಜೂರು ಮಾಡಿರುವ ಕ್ರಮ ಪ್ರಶ್ನಿಸಿರುವ ಅರ್ಜಿ ಸಂಬಂಧ ಸೂಕ್ತ ಮಾಹಿತಿ ಪಡೆದು ಸಲ್ಲಿಸುವಂತೆ ನಿರ್ದೇಶಿದೆ.
ಗ್ರಾಮದ ಬಿ.ಎಲ್. ಶಿಲ್ಪಾ ಗಣೇಶ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ.ಎನ್.ವಿ. ಅಂಜಾರಿಯಾ ಮತ್ತು ನ್ಯಾಯಾಧೀಶ.ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ''ಬೇಗೂರು ಗ್ರಾಮದ ಸರ್ವೆ ನಂ. 359ರಲ್ಲಿ 1.26 ಎಕರೆ ಜಮೀನನ್ನು ಗುಂಡುತೋಪು, ಕರಾಬ್ ಜಮೀನು ಎಂಬುದಾಗಿ ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಕಲ್ಯಾಣಿ ಇರುವುದರಿಂದ ಗ್ರಾಮಸ್ಥರು ಭಾವನಾತ್ಮಕ ಹಾಗೂ ಧಾರ್ಮಿಕ ಸಂಬಂಧ ಹೊಂದಿದ್ದಾರೆ. ಈ ಕಲ್ಯಾಣಿಯ ನೀರನ್ನು ದೇವರುಗಳ ಅಭಿಷೇಕಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಕಲ್ಯಾಣಿ ಸುತ್ತ 11 ಪುರಾತನ ಮರಗಳಿವೆ. ಅಲ್ಲದೇ ನಾಗೇಶ್ವರ, ನಂದಿ ಇತರೆ ದೇವರುಗಳ ಮೂರ್ತಿಗಳಿವೆ. ಈ ಭೂಮಿಯಲ್ಲಿ ಬ್ರಾಹ್ಮಣರು ಮತ್ತು ಜೈನರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ,'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
Post a comment
Log in to write reviews