ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ಪ್ರಕಟಿಸಿದೆ.
ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 41 ವಿಷಯಗಳಿಗೆ ಜನವರಿ 13ರಂದು ನಡೆದ ಪರೀಕ್ಷೆಯಲ್ಲಿ ಒಟ್ಟು 6,675 ಮಂದಿ ಅರ್ಹತೆ ಪಡೆದಿದ್ದು, ಅಷ್ಟೂ ಮಂದಿಯ ನೋಂದಣಿ ಸಂಖ್ಯೆಗಳನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆ ಪ್ರಮುಖವಾಗಿದ್ದು, ಇದರ ಜವಾಬ್ದಾರಿಯನ್ನು ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕೆಇಎಗೆ ವಹಿಸಿತ್ತು. ಅದನ್ನು ಯಶಸ್ವಿಯಾಗಿ ಮುಗಿಸಿದ್ದು, ವೆಬ್‌ಸೈಟ್‌ನಲ್ಲಿ ವಿಷಯವಾರು, ವರ್ಗಾವಾರು ಅರ್ಹರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೆ-ಸೆಟ್ ಪರೀಕ್ಷೆಗೆ ಒಟ್ಟು 1,17,303 ಮಂದಿ ನೋಂದಾಯಿಸಿಕೊಂಡು, 95,201 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 6,675 ಮಂದಿ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಪುರಷರು 3,398 ಹಾಗೂ ಮಹಿಳೆಯರು 3,180 ಹಾಗೂ ತೃತೀಯ ಲಿಂಗಿಗಳು 97 ಮಂದಿ ಇದ್ದಾರೆ. 350 ಮಂದಿ ವಿಶೇಷ ಸಾಮರ್ಥ್ಯವುಳ್ಳವರು ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ. ಯುಜಿಸಿ ಹಾಗೂ ರಾಜ್ಯದ ಮೀಸಲಾತಿ ನಿಯಮಗಳ ಪ್ರಕಾರ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದಾಖಲೆಗಳ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳಿಗೆ ಇ- ಪ್ರಮಾಣ ಪತ್ರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ನೀಡಲಾಗುವುದು ಎಂದೂ ಅವರು ವಿವರಿಸಿದ್ದಾರೆ.
Post a comment
Log in to write reviews