ಸಿನಿಮಾದ ಶೀರ್ಷಿಕೆಯಲ್ಲೇ ಫೋರ್ಸ್ ಇದೆ. ಅಂಥದ್ದೇ ಫೋರ್ಸ್ ಕಥೆಯಲ್ಲೂ ಇದೆ. ಸಿನಿಮಾ ನೋಡುಗರಿಗೆ ಒಂದೊಳ್ಳೆಯ ಫೀಲ್ ಕಟ್ಟಿಕೊಡುವ ಚಿತ್ರ ಅಂತ ಮುಲಾಜಿಲ್ಲದೆ ಹೇಳಬಹುದು. ಆದ್ರೆ, ಕೆಲವು ಸಣ್ಣಪುಟ್ಟ ಮಿಸ್ಟೇಕ್ ಇದ್ರೂ, ಅವೆಲ್ಲವನ್ನು ಬದಿಗೊತ್ತಿ ನೋಡೋದಾದ್ರೆ, ಭೈರಾದೇವಿ ಮೇಲೆ ತಕ್ಕಮಟ್ಟಿಗೆ ಭಕ್ತಿ ಉಕ್ಕಿಬರುತ್ತೆ.
ನಿರ್ದೇಶಕ ಶ್ರೀಜೈ ಅವ್ರು ಆಯ್ಕೆ ಮಾಡಿಕೊಂಡಂತಹ ಕಥೆಯ ಎಳೆ ಚೆನ್ನಾಗಿದೆ. ನಿರೂಪಣೆಯಲ್ಲಿ ಇನ್ನೂ ಒಂದಷ್ಟು ಧಮ್ ಕಟ್ಟಬೇಕಿತ್ತು. ಮೊದಲರ್ಧ ಅತ್ತಿತ್ತ ಅಲ್ಲಾಡದಂತೆ ತದೇಕಚಿತ್ತದಿಂದ ಸಿನಿಮಾ ಹೋಗುತ್ತೆ. ಭಯ ಹುಟ್ಟಿಸುವ ದೃಶ್ಯಗಳಿಂದಲೇ ಶುರುವಾಗುವ ಚಿತ್ರದ ಮೊದಲರ್ಧದಲ್ಲಿ ಯಾವ ತಪ್ಪುಗಳೂ ಕಾಣಸಿಗಲ್ಲ. ದ್ವಿತಿಯಾರ್ಧ ಒಂಚೂರು ಸಣ್ಣಪುಟ್ಟ ತಪ್ಪುಗಳು ಕಾಣಸಿಗುತ್ತವೆ. ಆದ್ರೆ, ಸಿನಿಮಾದ ಮೇಕಿಂಗ್, ಅದಕ್ಕೆ ಒಪ್ಪುವ ಲೊಕೇಷನ್ಸ್, ದೃಶ್ಯಕ್ಕೆ ಸರಿಹೊಂದುವ ಹಿನ್ನೆಲೆ ಸಂಗೀತ ಮತ್ತು ಅದ್ಭುತ ಎನಿಸುವ ಕ್ಯಾಮೆರಾ ಕೈಚಳಕ ಆ ತಪ್ಪುಗಳೆಲ್ಲವನ್ನೂ ಪಕ್ಕಕ್ಕೆ ಸರಿಸಿ ನೋಡುವಂತೆ ಮಾಡಿದೆ.
ಸಿನಿಮಾ ರೆಡಿಯಾಗಲು ತಡವಾಗಿದೆ ಅನ್ನೋದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತೆ. ಹಾಗಾಗಿ ಇಲ್ಲಿ ಒಂದಷ್ಟು ಕಂಟಿನ್ಯುಟಿ ಕೂಡ ಮಿಸ್ ಆಗಿದೆ. ಸೂಕ್ಷ್ಮವಾಗಿ ಗಮನಿಸಿದ್ರೆ, ಸಿನಿಮಾದಲ್ಲಿ ಒಂದಷ್ಟು ಕೊರತೆ ಕಾಣುವುದುಂಟು. ಆದರೆ ತೆರೆಮೇಲೆ ಅಬ್ಬರಿಸಿರುವ ಭೈರಾದೇವಿ ಪಾತ್ರ, ಅಘೋರಿಯ ಗುರು ಅಬ್ಬರ ಎಲ್ಲವೂ ಆ ಕೊರತೆಯನ್ನು ನೀಗಿಸಿರುವುದು ಸುಳ್ಳಲ್ಲ. ಕಥೆಯಲ್ಲಿ ಗಟ್ಟಿತನವಿದೆ. ಹಾಗಾಗಿ ಕೊನೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಹೋಗುತ್ತೆ.
ಎಲ್ಲೋ ಒಂದು ಕಡೆ ಚಿತ್ರಕಥೆ ಬಿಗಿಹಿಡಿತ ತಪ್ಪುತ್ತಿದ್ದಂತೆಯೇ, ಭಯಾನಕ ದೃಶ್ಯಗಳು ಭೀತಿ ಹುಟ್ಟಿಸುವ ಮೂಲಕ ಮತ್ತೆ ಕುತೂಹಲಕ್ಕೆ ಕಾರಣವಾಗುತ್ತೆ. ಮೊದಲರ್ಧ ಸಿನಿಮಾ ಪೂರ್ತಿ ನೋಡಲೇಬೇಕೆನಿಸೋದು ನಿಜ. ಆದರೆ, ದ್ವಿತಿಯಾರ್ಧದಲ್ಲಿ ಕೆಲ ಅನಗತ್ಯ ದೃಶ್ಯ, ಹಾಡೊಂದು ಕಾಣಿಸಿಕೊಂಡು ನೋಡುಗನ ಬೇಸರಕ್ಕೆ ದೂಡುತ್ತೆ. ಇನ್ನು, ಕ್ಲೈಮ್ಯಾಕ್ಸ್ ಇನ್ನಷ್ಟು ಬಿಗಿಯಾಗಿದ್ರೆ ಚೆನ್ನಾಗಿರ್ತಿತ್ತು... ಮೊದಲರ್ಧ ಇದ್ದ ಫೋರ್ಸ್ ಕ್ಲೈಮ್ಯಾಕ್ಸ್ ನಲ್ಲಿ ಕಡಿಮೆ ಆಯ್ತಾ ಅನಿಸುತ್ತೆ. ಆದರೆ ಭೈರಾದೇವಿಯ ಆರ್ಭಟ ಎಲ್ಲವನ್ನೂ ಮರೆಸುತ್ತೆ. ಒಂದೊಳ್ಳೆಯ ಫೀಲ್ ಕಟ್ಟಿಕೊಡುತ್ತೆ ಅನ್ನೋದೇ ಸಮಾಧಾನ.
ಒಟ್ಟಿನಲ್ಲಿ ದುಷ್ಠ ಶಕ್ತಿ ಓಡಿಸಲು ದೈವ ಶಕ್ತಿಯೇ ಬೇಕು ಅನ್ನುವ ಮಾತು ಈ ಸಿನಿಮಾ ಕಥೆಗೆ ಅನ್ವಯಿಸುತ್ತೆ. ಫೈನಲಿ ಇಲ್ಲೂ ಕೂಡ ಪ್ರೇತಾತ್ಮ ಮತ್ತು ದೈವದ ಗುದ್ದಾಟವಿದೆ. ಆ ಗುದ್ದಾಟ ಯಾಕೆ, ಏನು, ಎತ್ತ ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಒಂದೊಮ್ಮೆ ಭೈರಾದೇವಿಯ ದರ್ಶನ ಪಡೆಯಲು ಅಡ್ಡಿಯಿಲ್ಲ.
Post a comment
Log in to write reviews