ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ಮುಂದಿನ ಐಪಿಎಲ್(IPL 2025)ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕೋಚಿಂಗ್ ನಡೆಸುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ. ಸದ್ಯ ರಾಜಸ್ಥಾನ್ ತಂಡದ ಹಾಲಿ ಕೋಚ್ ಆಗಿರುವ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಇಂಗ್ಲೆಂಡ್ ಸೀಮಿತ ತಂಡದ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರ ಸ್ಥಾನಕ್ಕೆ ದ್ರಾವಿಡ್ ಅವರನ್ನು ನೇಮಕ ಮಾಡಲು ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ದ್ರಾವಿಡ್ ಜತೆ ಈಗಾಗಲೇ ಫ್ರಾಂಚೈಸಿ ಮಾತುಕತೆ ನಡೆಸಿದ್ದು ದ್ರಾವಿಡ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಇನ್ನೂ ಪ್ರಕಟಗೊಂಡಿಲ್ಲ. ಈ ಹಿಂದೆ ದ್ರಾವಿಡ್ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಪರವೇ 2 ಆವೃತ್ತಿಯಲ್ಲಿ ಕೋಚಿಂಗ್ ನಡೆಸಿದ್ದರು. ಅಂಡರ್ 19 ತಂಡದ ಕೋಚ್ ಆದ ಕಾರಣ ಐಪಿಎಲ್ ಕೋಚಿಂಗ್ನಿಂದ ದೂರ ಉಳಿದಿದ್ದರು.
ರಾಜಸ್ಥಾನ್ ರಾಯಲ್ಸ್ ಪರ ನಾಯಕರಾಗಿ ದ್ರಾವಿಡ್ ಒಮ್ಮೆ ತಂಡವನ್ನು ಪ್ಲೇ ಆಪ್ಗೆ ಕೊಂಡೊಯ್ದಿದ್ದರು. ಚಾಂಪಿಯನ್ಸ್ ಲೀಗ್ನಲ್ಲಿ ತಂಡ ಫೈನಲ್ಗೇರಿತ್ತು. ರಾಜಸ್ಥಾನ್ ತಂಡದ ಪರ 40 ಪಂದ್ಯಗಳಲ್ಲಿ ನಾಯಕರಾಗಿದ್ದ ದ್ರಾವಿಡ್ 23 ಗೆಲುವು ಕಂಡಿದ್ದಾರೆ. ಇದೀಗ ಎಲ್ಲ ಬಿಸಿಸಿಐ ಹುದ್ದೆಗಳಿಂದ ನಿವೃತ್ತಿ ಹೊಂದಿರುವ ದ್ರಾವಿಡ್ ಮತ್ತೆ ಐಪಿಎಲ್ ಕೋಚಿಂಗ್ ಕಡೆ ಗಮನಹರಿಸಿದ್ದಾರೆ ಎನ್ನಲಾಗಿದೆ.
Post a comment
Log in to write reviews