Samayanews.

Samayanews.

2024-11-15 07:26:06

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಯನಾಡು ಭೂಕುಸಿತ : ಮೃತರ ಸಂಖ್ಯೆ 143ಕ್ಕೆ ಏರಿಕೆ, ಸೇನೆಯಿಂದ ಸಾವಿರ ಜನರ ರಕ್ಷಣೆ

ವಯನಾಡ್: ದೇವರ ನಾಡು  ಕೇರಳದ ವಯನಾಡ್​​ ಜಿಲ್ಲೆಯಲ್ಲಿ ನಿನ್ನೆ (ಜುಲೈ 30) ಸಂಭವಿಸಿದ ಭೀಕರ ಭೂ ಕುಸಿತ ದೇವರ ನಾಡನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಭೂ ಕುಸಿತದಲ್ಲಿ ಮೃತರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ತಾತ್ಕಾಲಿಕ ಸೇತುವೆಯ ಮೂಲಕ ಸುಮಾರು 1,000 ಜನರನ್ನು ರಕ್ಷಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಸೋಮವಾರ-ಮಂಗಳವಾರ ರಾತ್ರಿ ಸುರಿದ ರಣಮಳೆಗೆ ವಯನಾಡ್​ನ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ನಾಲ್ಕೈದು ಗ್ರಾಮಗಳು ಸಂಪೂರ್ಣವಾಗಿ ಭೂಸಮಾಧಿಯಾಗಿದ್ದವು. ಅಪಾರ ಪ್ರಮಾಣದಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಮೆಪ್ಪಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 50 ಮೃತದೇಹಗಳನ್ನು ಇರಿಸಲಾಗಿದೆ. ಗಾಯಗೊಂಡಿರುವ ಕನಿಷ್ಠ 116 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಜ್ಯ ಕಂದಾಯ ತಿಳಿಸಿದೆ.

ಸೇನೆಯಿಂದ ರಕ್ಷಣಾ ಕಾರ್ಯ: ''ಮಳೆಗಾಲವಾಗಿರುವ ಹಿನ್ನೆಲೆಯಲ್ಲಿ ಸೇನೆ ಕಳೆದ 15 ದಿನಗಳಿಂದ ಕಟ್ಟೆಚ್ಚರದಲ್ಲಿದೆ. ವಯನಾಡ್​ನಲ್ಲಿ ಸಂಭವಿಸಿದ ಭೂಕುಸಿತದ ನಂತರ ಮಂಗಳವಾರ ಬೆಳಗ್ಗೆ ಕೇರಳ ಸರ್ಕಾರ ಸೇನೆಯನ್ನು ಸಂಪರ್ಕಿಸಿತು. ಎನ್​ಡಿಆರ್​ಎಫ್​ ಮತ್ತು ರಾಜ್ಯ ತಂಡಗಳೂ ಕೂಡಾ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ನೌಕಾಪಡೆ ಮತ್ತು ವಾಯುಪಡೆಯೂ ಸಮಾನ ಕೊಡುಗೆ ನೀಡುತ್ತಿವೆ'' ಎಂದು ರಕ್ಷಣಾ ಭದ್ರತಾ ದಳ ಕೇಂದ್ರದ ಕಮಾಂಡೆಂಟ್, ಕರ್ನಲ್ ಪರಮವೀರ್ ಸಿಂಗ್ ನಾಗ್ರಾ ತಿಳಿಸಿದರು.

''ಭೂಕುಸಿತವಾದ ಭಾಗದಲ್ಲಿ ಪ್ರಮುಖ ಸಂಪರ್ಕ ಸೇತುವೆಯೊಂದು ಕೊಚ್ಚಿಹೋಗಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ. ಅದರೊಂದಿಗೆ ಸರಿಸುಮಾರು 1,000ಕ್ಕೂ ಹೆಚ್ಚು ಜನರನ್ನು ಈ ಸುರಕ್ಷಿತ ಸ್ಥಳದೆಡೆಗೆ ಕರೆದೊಯ್ಯಲಾಗಿದೆ. ಕೆಲವು ಮೃತದೇಹಗಳನ್ನೂ ಸಾಗಿಸಲಾಗಿದೆ. ಸುಮಾರು 18ರಿಂದ 25 ಜನರು ಭೂಕುಸಿತ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ. ಎಲ್ಲರೊಂದಿಗೆ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯ ನಡೆಸುತ್ತಿದ್ದೇವೆ'' ಎಂದು ಹೇಳಿದರು.

ಸಹಾಯವಾಣಿ ಸಂಖ್ಯೆಗಳು: ತಿರುವನಂತಪುರಂನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಶೇಷ 24 ಗಂಟೆಗಳ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ರಾಜ್ಯ ಪೊಲೀಸ್ ಮುಖ್ಯಸ್ಥರ ನೇರ ನಿಗಾವಣೆಯಲ್ಲಿ ನಿಯಂತ್ರಣ ಕೊಠಡಿ ಕಾರ್ಯ ನಿರ್ವಹಿಸುತ್ತಿದೆ. ತುರ್ತು ನೆರವು ಅಗತ್ಯವಿರುವವರು 9497900402 ಮತ್ತು 0471-2721566 ಈ ಎರಡು ಸಂಖ್ಯೆಗಳನ್ನು ಸಂಪರ್ಕಿಸಬಹುದು. ಆರೋಗ್ಯ ಇಲಾಖೆ ಕೂಡಾ ಸಹಾಯವಾಣಿ ಕೇಂದ್ರ ಆರಂಭಿಸಿ, 9656938689 ಮತ್ತು 8086010833 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ. ಮತ್ತೊಂದೆಡೆ, ನಿರಾಶ್ರಿತ ಜನರಿಗಾಗಿ 118 ಪರಿಹಾರ ಕೇಂದ್ರಗಳನ್ನು ರಾಜ್ಯ ಸರ್ಕಾರ ತೆರೆದು, ಅಲ್ಲಿ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಿದೆ.

img
Author

Post a comment

No Reviews