ದಸರಾ ಖಾಸಗಿ ದರ್ಬಾರ್ಗೆ ಆನೆಗಳ ಪರಿಶೀಲಿಸಿದ ರಾಜವಂಶಸ್ಥೆ: ಪಟ್ಟದ ಆನೆಯಾಗಿ ಕಂಜನ್, ನಿಶಾನೆ ಆನೆಯಾಗಿ ಭೀಮ ಆಯ್ಕೆ
ಮೈಸೂರು:ಗಜಪಡೆಯಲ್ಲಿನ ಕಂಜನ್ ಹಾಗೂ ಭೀಮ ಆನೆಯನ್ನು ಅರಮನೆಯ ಒಳಗಡೆ ರಾಜವಂಶಸ್ಥರು ನಡೆಸುವ ಖಾಸಗಿ ದಸರಾಗೆ ಪಟ್ಟದ ಆನೆ ಹಾಗೂ ನಿಶಾನೆ ಆನೆಯನ್ನಾಗಿ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಯ್ಕೆ ಮಾಡಿದ್ದಾರೆ. ಈ ಆನೆಗಳು 10 ದಿನಗಳ ಕಾಲ ಅರಮನೆಯ ಶರನ್ನವರಾತ್ರಿಯ (ಶರನ್) ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿವೆ.
ನಾಡಹಬ್ಬ ದಸರಾ ಮಹೋತ್ಸವದಕ್ಕೆ ದಿನಗಣನೆ ಆರಂಭಾವಾಗಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿಯ ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 12ರ ವರೆಗೆ ನಡೆಯಲಿದೆ. ಅರಮನೆ ಒಳಗಡೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಿನ್ನದ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಸಮಯದಲ್ಲಿ ಪಟ್ಟದ ಆನೆ, ಒಂಟೆ, ಹಸು, ಕಳಸ ಹೊತ್ತ ಮುತ್ತೈದೆಯರೊಂದಿಗೆ ದೇವರನ್ನು ತೆಗೆದುಕೊಂಡು ಹೋಗುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಪಟ್ಟದ ಆನೆಯಾಗಿ ಕಂಜನ್ ಹಾಗೂ ನಿಶಾನೆ ಆನೆಯಾಗಿ ಭೀಮ ಆನೆಯನ್ನು ಆಯ್ಕೆ ಮಾಡಲಾಗಿದೆ.
ಆನೆಗಳ ಪರಿಶೀಲಿಸಿ ಆಯ್ಕೆ ಮಾಡಿದ ರಾಜಮಾತೆ: ಅರಮನೆಯಲ್ಲಿ ನಡೆಯುವ ಧಾರ್ಮಿಕ ಪೂಜೆ ಕಾರ್ಯಗಳಲ್ಲಿ ಭಾಗವಹಿಸಲು ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಭಾನುವಾರ ಅರಮನೆಯ ಕನ್ನಡಿ ತೊಟ್ಟಿಯ ಬಳಿ ರಾಜವಂಶಸ್ಥರು ನಡೆಸಿದರು. ಈ ವೇಳೆ, ಗಜಪಡೆಯ ಗಂಡಾನೆಗಳಾದ ಭೀಮ, ಕಂಜನ್, ಸುಗ್ರೀವ, ಗೋಪಿ, ಏಕಲವ್ಯ ಮತ್ತು ಲಕ್ಷ್ಮಿ ಮತ್ತು ಹಿರಣ್ಯ ಆನೆಗಳನ್ನು ಪರಿಶೀಲಿಸಿದ ರಾಜಮಾತೆ ಪ್ರಮೋದಾದೇವಿ, ಪಟ್ಟದ ಆನೆಯಾಗಿ ಕಂಜನ್ ಹಾಗೂ ನಿಶಾನೆ ಆನೆಯಾಗಿ ಭೀಮ ಆನೆಯನ್ನು ಆಯ್ಕೆ ಮಾಡಿದರು.
ಪಟ್ಟದ ಆನೆಯಾಗಿ ಕಂಜನ್: ವಿಶೇಷ ಹೆಸರಿನಿಂದಲೇ ಹೆಚ್ಚು ಖ್ಯಾತಿ ಪಡೆದಿರುವ ಕಂಜನ್ ಆನೆ ಮೃದು ಸ್ವಭಾವಿಯಾಗಿದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ 2ನೇ ಬಾರಿ ಪಾಲ್ಗೊಳ್ಳುತ್ತಿದೆ. 25 ವರ್ಷದ ಈ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಎಸಳೂರಿನ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಹುಲಿ ಮತ್ತು ಕಾಡಾನೆ ಸೆರೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುವ ಇದು ದುಬಾರಿ ಆನೆ ಶಿಬಿರದಲ್ಲಿರುತ್ತದೆ. 2023ರಲ್ಲಿ ಮೊದಲ ಬಾರಿಗೆ ನಾಡಹಬ್ಬದಲ್ಲಿ ಪಾಲ್ಗೊಂಡಿತ್ತು. ಕಂಜನ್ ಎರಡನೇ ಬಾರಿ ಪಟ್ಟದ ಆನೆಯಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಮಾವುತ ಜೆ.ಡಿ.ವಿಜಯ್ ಮತ್ತು ಕಾವಾಡಿ ಕಿರಣ್ ಕಂಜನ್‌ನ ಆರೈಕೆ ಮಾಡುತ್ತಾರೆ.
ನಿಶಾನೆ ಆನೆಯಾಗಿ ಅರ್ಜುನನ ಸ್ಥಾನ ತುಂಬಲಿರುವ ಬಲ ಭೀಮ: ಈ ಬಾರಿಯ ದಸರಾ ಮಹೋತ್ಸವದಲ್ಲಿ ಅರ್ಜುನ ಆನೆಯ ಅನುಪಸ್ಥಿತಿ ಹೆಚ್ಚಾಗಿ ಕಾಣುತ್ತಿದೆ. ನಿಶಾನೆ ಆನೆಯಾಗಿ ಅರ್ಜುನನ ಸ್ಥಾನವನ್ನು ಯಾವ ಆನೆ ತುಂಬುತ್ತದೆ ಎಂಬ ಪ್ರಶ್ನೆ ಮೂಡಿತ್ತು. ಭೀಮ ಆನೆಯನ್ನು ಅರಮನೆಯ ಪಟ್ಟದ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಅತ್ಯಂತ ಸೌಮ್ಯ ಸ್ವಭಾವದ 24 ವರ್ಷದ ಭೀಮ ಆನೆಯನ್ನು 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 2017ರಲ್ಲಿ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ಮೈಸೂರಿಗರ ಅಚ್ಚು ಮೆಚ್ಚಿನ ಆನೆಯಾಗಿದೆ. ಮಾವುತನಾಗಿ ಗುಂಡಣ್ಣ ಮತ್ತು ಕಾವಾಡಿಯಾಗಿ ನಂಜುಂಡಸ್ವಾಮಿ ಈ ಆನೆಯನ್ನು ಹಾರೈಕೆ ಮಾಡುತ್ತಿದ್ದಾರೆ.
Post a comment
Log in to write reviews