ಬೆಂಗಳೂರು : ಬೆಂಗಳೂರಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಒಟ್ಟು ಎರಡು ಸುರಂಗ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದರು ಸುದ್ದಿಗಾರರೊಂದಿಗರ ಮಾತನಾಡಿದ ಅವರು ಬೆಂಗಳೂರಿನ ಟ್ರಾಫಿಕ್ ಇಳಿಕೆಗೆ ಕೇವಲ 2-3 ಕೀಲೋ ಮೀಟರ್ ಸುರಂಗ ಮಾರ್ಗ ನಿರ್ಮಿಸಿದರೆ ಸಾಲದು. ಹೀಗಾಗಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯ ಭಾಗವಾಗಿ 18-20 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ಕಾರಿಡಾರ್‌ನ ವರದಿ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೂ ಯೋಜನೆಗೆ ಬೇಕಾದ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಶೀಘ್ರವೇ ಸರ್ಕಾರದಿಂದ ಟೆಂಡರ್ ಆಹ್ವಾನಿಸಲಾಗುವುದು. ಹೀಗೆ ಒಂದೊಂದಾಗಿ ಪ್ರಕ್ರಿಯೆ ಆರಂಭಿಸಲಾಗುವುದು, ಹಂತಹಂತವಾಗಿ ಉದ್ದೇಶಿತ ಯೋಜನೆಯ ಕಾಮಗಾರಿಗೆ ಕೈ ಹಾಕಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು . ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ 18-20 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲು ಸಿದ್ಧತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಹೆಬ್ಬಾಳ, ದೇವನಹಳ್ಳಿ ಹಾಗೂ ವಿಮಾನ ನಿಲ್ದಾಣ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಕಡೆಗೆ ತೆರಳುವವರಿಗೆ ಸಂಚಾರ ದಟ್ಟಣೆ ಇಲ್ಲದೇ ಸರಾಗವಾಗಿ ತೆರಳುವಂತೆ ಮಾಡಲು ನಗರದ ದಕ್ಷಿಣ ಭಾಗದಲ್ಲಿ ಸುರಂಗ ರಸ್ತೆ ಯೋಜನೆ ರೂಪಿಸಲಾಗಿದೆ. ದಕ್ಷಿಣ ಭಾಗದಲ್ಲಿ ಸುರಂಗ ರಸ್ತೆಗೆ ಹೆಬ್ಬಾಳದ ಎಸ್ಟಿಮ್ ಮಾಲ್, ಜಯನಗರದ ಅಶೋಕ್ ಪಿಲ್ಲರ್, ಸಿಲ್ಕ್ ಬೋರ್ಡ್ ಜಂಕ್ಷನ್, ಗಾಲ್ಫ್ ಕೋರ್ಸ್ ರಸ್ತೆ, ಅರಮನೆ ರಸ್ತೆಯಿಂದ ಪ್ರವೇಶ ಪಡೆಯುಬಹುದು. ಇನ್ನೂ ದಕ್ಷಿಣ-ಉತ್ತರ ಸುರಂಗ ಮಾರ್ಗದ ರಸ್ತೆಯು ಚಾಲುಕ್ಯ ವೃತ್ತ, ಕಬ್ಬನ್ ಉದ್ಯಾನ, ಕೆಎಚ್ ರಸ್ತೆ, ಜಯನಗರ, ರೇಷ್ಮೆ ಮಂಡಳಿ ಜಂಕ್ಷನ್, ಹೆಬ್ಬಾಳದ ಎಸ್ಟಿಮ್ ಮಾಲ್ ಮಾರ್ಗವಾಗಿ ಸಾಗಲಿದೆ ಎಂದು ಆಯುಕ್ತರು ತಿಳಿಸಿದರು.
Post a comment
Log in to write reviews