ತುಮಕೂರು: ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವನೆ ಮಾಡಿದವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ವಾಂತಿ ಬೇಧಿಯಿಂದ ಓರ್ವ ಮಹಿಳೆ ಮೃತಪಟ್ಟರೆ, 6 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ತುಮಕೂರಿನ ಮಧುಗಿರಿ ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ನಾಲ್ವರು ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ಮಧುಗಿರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
ಕಾಟಮ್ಮ(45) ಮೃತ ದುರ್ದೈವಿ. ಶನಿವಾರ ಗ್ರಾಮದಲ್ಲಿ ಮುತ್ತು ರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಇಡೀ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮಾಡಿದ ಬಳಿಕ ಗ್ರಾಮದ ಕೆಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಶನಿವಾರ ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85) ಸಾವನ್ನಪ್ಪಿದ್ದರು. ಬಳಿಕ ಭಾನುವಾರ ವೃದ್ದೆ ಗಿರಿಯಮ್ಮ(90) ಮೃತಪಟ್ಟಿದ್ದಾರೆ.
ಇನ್ನೂ ಆರೋಗ್ಯ ಇಲಾಖೆ ಈ ಇಬ್ಬರು ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಇದೀಗ ವಾಂತಿ ಬೇಧಿಯಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಟಮ್ಮ (45) ಕೂಡ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದೇ ಗ್ರಾಮದಲ್ಲಿ ಮೂವರ ಸಾವು, ಅನುಮಾನ ಹುಟ್ಟುಹಾಕಿದೆ ಎನ್ನಲಾಗಿದೆ.
ಸದ್ಯ ಗ್ರಾಮಕ್ಕೆ ಎ.ಸಿ ತಹಶಿಲ್ದಾರ್, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಸ್ವಸ್ಥಗೊಂಡ 6 ಜನರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಲಕ್ಷಣ ಕಾಣಿಸಿಕೊಂಡವರಿಗೆ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.
Post a comment
Log in to write reviews