ಕಲಬುರಗಿ: ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಈಗಾಗಲೇ 371 ಹಾಸಿಗೆಗಳಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ 222 ಕೋಟಿ.ರೂ ಅನುದಾನ ನೀಡಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (KKRDB) ಮಂಡಳಿಯು ಈಗ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಮಂಡಳಿಯಿಂದಲೇ 50 ಅಂಬ್ಯುಲೆನ್ಸ್‌ಗಳನ್ನು ನೀಡಲು ನಿರ್ಧರಿಸಿದೆ.
ಹೃದ್ರೋಗಕ್ಕೆ ಒಳಗಾದವರನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸುವುದು ಮುಖ್ಯವಾಗಿರುತ್ತದೆ. ಗ್ರಾಮೀಣ ಭಾಗದ ಹೃದ್ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ದೊರಕುವಂತಾಗಲು ಅಂಬ್ಯುಲೆನ್ಸ್ ನೀಡಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷರಾಗಿರುವ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಹೇಳಿದರು.
ನಗರದಲ್ಲಿ ಕೆಕೆಆರ್ ಡಿಬಿ ಸಂಪೂರ್ಣ 222.65 ಕೋ.ರೂ ಅನುದಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ 371 ಹಾಸಿಗೆಯುಳ್ಳ ಜಯದೇವ ಹೃದ್ರೋಗ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅಂಬ್ಯುಲೆನ್ಸ್ ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಇರಲಿದ್ದು, ಅಂಬ್ಯುಲೆನ್ಸ್ ಕಾರ್ಯನಿರ್ವಹಣೆಗಾಗಿ ಕೆಕೆಆರ್ ಡಿಬಿಯಿಂದಲೇ ಹಾಟ್ ಲೈನ್ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಿಸಿದರು. ಕಲಬುರಗಿ ನಗರ ಹಾಗೂ ಸುತ್ತಮುತ್ತಲಿನ ಹೃದ್ರೋಗಿಗಳನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿದರೆ ಉಳಿದ ತಾಲೂಕುಗಳಲ್ಲಿ ಮೊದಲು ತಾಲೂಕು ಆಸ್ಪತ್ರೆಯಲ್ಲಿ ಮೊದಲ ಹಂತದ ಚಿಕಿತ್ಸೆ ನೀಡಲಾಗಿ, ತದನಂತರ ಹೃದ್ರೋಗ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಒಟ್ಟಾರೆ ಹೃದಯ ರೋಗಿಗಳಿಗೆ ಬೇಗ ಚಿಕಿತ್ಸೆ ದೊರಕಲು ಅಂಬ್ಯುಲೆನ್ಸ್ ನೀಡಲಾಗುತ್ತಿದೆ. ಕಲಬುರಗಿಯಲ್ಲಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಇನ್ನೂ ಹೆಚ್ಚುವರಿ ಹಣ ಕೇಳಿದರೆ ಇನ್ನಷ್ಟು ಹಣ ಮಂಡಳಿಯಿಂದ ನೀಡಲಾಗುವುದು ಎಂದು ಡಾ.ಅಜಯಸಿಂಗ್ ವಿವರಣೆ ನೀಡಿದರು.
ಜಯದೇವ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸೆ.17 ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಉದ್ಘಾಟನೆ ನೆರವೇರಿಸಬಹುದಿತ್ತು. ಆದರೆ ಆ ದಿನ ಕಕ ಭಾಗದ ಸಚಿವರು ಅವರವರ ಜಿಲ್ಲೆಯಲ್ಲಿ ಕಕ ಉತ್ಸವದಲ್ಲಿ ಭಾಗಿಯಾಗುವುದರಿಂದ ಬೇರೆ ದಿನದಂದೇ ಸಿಎಂ ಹಾಗೂ ಸಚಿವರೊಂದಿಗೆ ಸಮಾಲೋಚಿಸಿ ದಿನಾಂಕ ನಿರ್ಧರಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ 9 ಸರ್ಕಾರಿ, ಒಂದು ಸಿಯುಕೆ ಹಾಗೂ ಮೂರು ಖಾಸಗಿ ವಿವಿಗಳ ಅಭಿವೃದ್ಧಿಗೆಂದು ರಾಜ್ಯಪಾಲರ ವಿವೇಚನಾ ನಿಗದಿ ಎಂಬುದಾಗಿದೆ. ಆದರೆ ಒಂದೇ ಒಂದು ಪೈಸೆ ಕಕ ಹೊರ ಭಾಗದಲ್ಲಿ ವಿನಿಯೋಗವಾಗುವುದಿಲ್ಲ ಎಂದು ಡಾ. ಅಜಯಸಿಂಗ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
Post a comment
Log in to write reviews