ಕರ್ನಾಟಕ
22 ಲಕ್ಷ ಮೌಲ್ಯದ 50 ಲ್ಯಾಪ್‌ಟಾಪ್ ಕಳವು: ಮಾಜಿ ಉದ್ಯೋಗಿ ಸೆರೆ
ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ 22 ಲಕ್ಷ ರೂ. ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದ ತಮಿಳುನಾಡಿನ ಹೊಸೂರಿನ ಮುರುಗೇಶ್ ಎಂಬ ಆರೋಪಿಯನ್ನು ವೈಟ್ ಫೀಲ್ಡ್ ಠಾಣಾ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದರು.
ಫೆಬ್ರವರಿ ತಿಂಗಳಲ್ಲಿ ಮುರುಗೇಶ್ ಎಂಬುವವರು ಬಿಸಿಎ ವ್ಯಾಸಂಗ ಮಾಡಿದ್ದ ಐಟಿಪಿಲ್ ಬಳಿಯಿರುವ ಕಂಪನಿಯೊಂದರಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಪ್ರಾರಂಭಿಸಿದ್ದರು. ಆಗಸ್ಟ್ 22ರಿಂದ ಕೆಲಸಕ್ಕೆ ಬಾರದೆ ಗೈರಾಗಿದ್ದ. ಆರೋಪಿ ಕೆಲಸ ನಿರ್ವಹಿಸುತ್ತಿದ್ದಾಗ ಆತನ ಸುಪರ್ದಿಯಲ್ಲಿದ್ದ ಒಟ್ಟು 57 ಲ್ಯಾಪ್‌ಟಾಪ್‌ಗಳು ನಾಪತ್ತೆಯಾಗಿರುವುದನ್ನು ಕಂಡು ಅನುಮಾನಗೊಂಡ ಕಂಪನಿಯವರು ಪರಿಶೀಲಿಸಿದಾಗ ಕಂಡು ಬಂದಿದ್ದು, ತಕ್ಷಣ ಕಂಪನಿಯ ಪ್ರತಿನಿಧಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಹೊಸೂರಿನಲ್ಲಿರುವ ತನ್ನ 5 ಎಕರೆ ಜಮೀನಿನಲ್ಲಿ ಸಾಲ ಮಾಡಿ ಟೊಮ್ಯಾಟೊ ಬೆಳೆದಿದ್ದ ಆರೋಪಿಗೆ ಉತ್ತಮ ಬೆಲೆ ಸಿಗದೆ ಸಾಕಷ್ಟು ನಷ್ಟವಾಗಿದ್ದರಿಂದ ಸಾಲ ತೀರಿಸಲಾಗದೆ ಕಳ್ಳತನಕ್ಕಿಳಿದಿದ್ದ ಆರೋಪಿಯು ಕದ್ದ ಲ್ಯಾಪ್‌ಟಾಪ್‌ಗಳನ್ನು ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆರೋಪಿ ಕಳವು ಮಾಡಿದ್ದುದರ ಪೈಕಿ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Post a comment
Log in to write reviews