ಬೆಳಗಾವಿ: ತಡರಾತ್ರಿ ಮಳೆ ಜೊತೆ ಬಿರುಗಾಳಿ ಬೀಸಿದ ಪರಿಣಾಮ ಮನೆಯೊಂದು ಹಠಾತ್ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ನಡೆದಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗಾಳಿ ಮಳೆ ತೀವ್ರತೆಗೆ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ.
ಸಾವಂತ್ ತೇಗೂರ್ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ತುಂಬು ಗರ್ಭಿಣಿ ಸೇರಿ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಡರಾತ್ರಿ ಮಳೆಯ ಜೊತೆ ಬಿರುಗಾಳಿ ಬೀಸಿದೆ. ಮಳೆಯ ಅರ್ಭಟ ಹೆಚ್ಚಾದ ಹಿನ್ನೆಲೆ ಮನೆಯಲ್ಲಿ ಮಲಗಿದ್ದವರು ನಿದ್ದೆಯಿಂದ ಎಚ್ಚರವಾಗಿದ್ದಾರೆ. ಮನೆಯ ಗೋಡೆ ಬಿರುಕು ಬಿಟ್ಟಿರುವ ಶಬ್ದ ಕೇಳಿದ ತಕ್ಷಣ ಮನೆಯವರೆಲ್ಲ ಹೊರಗೆ ಓಡಿ ಹೋಗಿದ್ದಾರೆ. ಹಾಗಾಗಿ, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಇನ್ನು ಖಾನಾಪುರ ತಾಲೂಕಿನ ಹೆಮ್ಮಡಗಾ ಬಳಿ ಹಲಾತ್ರಿ ಹಳ್ಳದ ಕಣ್ಣಾಮುಚ್ಚಾಲೆಗೆ ಜನ ಸುಸ್ತು ಆಗಿದ್ದಾರೆ. ಕೆಲ ಹೊತ್ತು ಬ್ರಿಡ್ಜ್ ಓಪನ್ ಆಗುತ್ತದೆ. ಮತ್ತೆ ಕೆಲ ಹೊತ್ತು ಬಂದ್ ಆಗುತ್ತದೆ. ಮಳೆ ಹೆಚ್ಚಾದರೆ ಸಂಚಾರ ಬಂದ್, ಮಳೆ ಕಡಿಮೆ ಆದರೆ ಮಾತ್ರ ಇಲ್ಲಿ ಜನ ಓಡಾಡಬಹುದು. ಕಳೆದ 40 ವರ್ಷಗಳಿಂದ ಬ್ರಿಡ್ಜ್ ಸಮಸ್ಯೆಯಿದೆ. ಪ್ರತಿ ಮಳೆಗಾಲದಲ್ಲಿ 20ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ. ಅಪಾಯದಲ್ಲಿರುವ ಸೇತುವೆ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೇತುವೆ ಮುಳುಗಡೆಯಾದರೆ ಕರ್ನಾಟಕ, ಗೋವಾ ರಾಜ್ಯಗಳ ಸಂಪರ್ಕ ಕಡಿತವಾಗಿ, ಕಾಡಂಚಿ ಗ್ರಾಮದ ಜನರು ಪರದಾಡಬೇಕಾಗುತ್ತದೆ. ದಿನ ಬಳಕೆ ವಸ್ತುಗಳನ್ನು ತರಲು ಕೂಡ ದುಸ್ತರವಾಗುತ್ತದೆ. ಹಲಾತ್ರಿ ಬ್ರಿಡ್ಜ್ ಮೇಲ್ದರ್ಜೆಗೆ ಏರಿಸಲು ಇಲ್ಲಿನ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Post a comment
Log in to write reviews