ಗೋಮಾ, ಕಾಂಗೋ: ಪೂರ್ವ ಕಾಂಗೋದ ಕಿವು ಸರೋವರದಲ್ಲಿ 278 ಪ್ರಯಾಣಿಕರಿದ್ದ ದೋಣಿಯೊಂದು ಗುರುವಾರ ಮಗುಚಿ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಹೇಳಿದೆ.
ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು. ಪ್ರಯಾಣಿಕರಿಂದ ತುಂಬಿದ್ದ ದೋಣಿಯು ಕಿಟುಕು ಬಂದರಿನಿಂದ ಕೇವಲ ಮೀಟರ್ (ಗಜ) ದೂರದಲ್ಲಿ ಡಾಕ್ ಮಾಡಲು ಪ್ರಯತ್ನಿಸುತ್ತಿರುವಾಗ ಮುಳುಗಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ದೋಣಿ ಮುಳುಗಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಕನಿಷ್ಠ 50 ಶವಗಳನ್ನು ಹೊರತೆಗೆದು, ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿ ಅವರೆನ್ನಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕಾಂಗೋಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಓವರ್‌ಲೋಡ್ ದೋಣಿ ಪ್ರಯಾಣದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಮತ್ತು ಜಲ ಸಾರಿಗೆ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೂ ಇಂತಹ ದುರ್ಘಟನೆಗಳು ನಿಂತಿಲ್ಲ.
ಕಳದೆ ಜೂನ್‌ನಲ್ಲಿ, ಕಿನ್ಶಾಸಾದ ರಾಜಧಾನಿ ಬಳಿ ಓವರ್‌ಲೋಡ್ ಆಗಿದ್ದ ದೋಣಿ ಮುಳುಗಿ 80 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು. ಜನವರಿಯಲ್ಲಿ, ಮಾ-ನ್ಡೊಂಬೆ ಸರೋವರದಲ್ಲಿ 22 ಜನರು ಸಾವನ್ನಪ್ಪಿದರು ಮತ್ತು ಏಪ್ರಿಲ್ 2023 ರಲ್ಲಿ ಆರು ಮಂದಿ ಮೃತಪಟ್ಟಿದ್ದರು.
Post a comment
Log in to write reviews