ಜಗತ್ತು
ಇಸ್ರೇಲ್ ದಾಳಿಯಿಂದ 9 ಪ್ಯಾಲೆಸ್ಟೈನಿಯರ ಸಾವು
ಗಾಜಾ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಉತ್ತರ ಗಾಜಾ ಪಟ್ಟಿಯ ಜಬಾಲಿಯಾ ಪಟ್ಟಣದ ಮನೆಯೊಂದರ ಮೇಲೆ ಕನಿಷ್ಠ ಒಂಬತ್ತು ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ.
ಜಬಾಲಿಯಾದ ಗಾಜಾ ಸ್ಟ್ರೀಟ್ನಲ್ಲಿರುವ ಅಲ್-ಖುದ್ಸ್ ಮುಕ್ತ ವಿಶ್ವವಿದ್ಯಾಲಯದ ಡಾ.ಅಕ್ರಮ್ ಅಲ್-ನಜ್ಜರ್ ಅವರ ಮನೆಯ ಮೇಲೆ ಇಸ್ರೇಲ್ ವಿಮಾನಗಳು ದಾಳಿ ನಡೆಸಿದ್ದು, ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ನೆರೆಹೊರೆಯ ಮನೆಗಳಲ್ಲಿನ ಇತರರು ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿನ ಪ್ಯಾಲೆಸ್ಟೈನ್ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸ್ಸಾಲ್ ತಿಳಿಸಿದ್ದಾರೆ.
ದಾಳಿ ನಡೆದ ಮನೆ ಮತ್ತು ಅದರ ಪಕ್ಕದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮತ್ತು ಕಾಣೆಯಾದವರನ್ನು ರಕ್ಷಿಸಲು ನಾಗರಿಕ ರಕ್ಷಣಾ ತಂಡಗಳು ಕೆಲಸ ಮಾಡುತ್ತಿವೆ ಎಂದು ವರದಿ ಮಾಡಿದೆ ಎನ್ನಲಾಗಿದೆ. ಈ ದಾಳಿಯ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹಮಾಸ್ ಉಗ್ರರು ಆರು ಜನ ಇಸ್ರೇಲಿ ಒತ್ತೆಯಾಳುಗಳನ್ನು ಕೊಂದ ಸುರಂಗವನ್ನು ತೋರಿಸುವ ವೀಡಿಯೊ ತುಣುಕನ್ನು ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿದೆ. ಇದೇ ಸುರಂಗದಲ್ಲಿ ಆರು ಜನ ಇಸ್ರೇಲಿಗರ ಶವ ಪತ್ತೆಯಾಗಿದ್ದವು. ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಮಂಗಳವಾರ ಸುರಂಗಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ವೀಡಿಯೊವನ್ನು ಪ್ರಸ್ತುತಪಡಿಸಿದರು. ದಕ್ಷಿಣ ಗಾಜಾದ ರಾಫಾದಲ್ಲಿನ ವಸತಿ ಮನೆಯಲ್ಲಿ ರಹಸ್ಯವಾಗಿ ಕೊರೆಯಲಾಗಿದ್ದ ಸುರಂಗ ಮಾರ್ಗದ ಶಾಫ್ಟ್ 20 ಮೀಟರ್ ಆಳದಲ್ಲಿರುವ ಸುರಂಗಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಅವರು ಹೇಳಿದರು.
"ಈ ಸುರಂಗ ಅತ್ಯಂತ ಕಿರಿದಾಗಿದ್ದು, ಒಳಗೆ ಸಾಕಷ್ಟು ಗಾಳಿಯಾಡುವುದಿಲ್ಲ. ಅಲ್ಲದೆ ಒಳಗಡೆ ಶೌಚ, ಸ್ನಾನಗೃಹಗಳೂ ಇಲ್ಲ. ಸುರಂಗವು ತುಂಬಾ ಆರ್ದ್ರವಾಗಿದ್ದು, ಒಳಗೆ ಉಸಿರಾಡಲು ಸಾಕಾಗುವಷ್ಟು ಕೂಡ ಗಾಳಿ ಇಲ್ಲ" ಎಂದು ಹಗರಿ ಹೇಳಿದರು.
"ಸುರಂಗದಲ್ಲಿ ಚೆಸ್ ಬೋರ್ಡ್, ಹೇರ್ ಬ್ರಷ್, ಯುಎಸ್ ಬಿ ಚಾರ್ಜರ್ ಗಳು, ಮದ್ದುಗುಂಡುಗಳನ್ನು ಹೊಂದಿರುವ ಕಲಾಶ್ನಿಕೋವ್ ರೈಫಲ್ ಮತ್ತು ಫ್ಲ್ಯಾಶ್ ಲೈಟ್ಗಳು ಪತ್ತೆಯಾಗಿವೆ. ಅಲ್ಲದೆ ನೆಲದ ಮೇಲೆ ರಕ್ತದ ಕಲೆಗಳು ಗೋಚರಿಸುತ್ತಿವೆ" ಎಂದು ಅವರು ತಿಳಿಸಿದರು.
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 41,020ಕ್ಕೇರಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Post a comment
Log in to write reviews