ಅಂದದ ಕಣ್ಣಿಗೆ ಹಾಕುವ ಚಂದದ ಕಾಡಿಗೆ (ಕಣ್ಣುಕಪ್ಪು) ಅನ್ನು ನಿಮ್ಮ ಮನೆಯಲ್ಲೆ ಹೀಗೆ ತಯಾರಿಸಿ.
ಅಂದವಾಗಿ ಕಾಣಬೇಕು ಎನ್ನುವ ಹಂಬಲ ಯಾರಿಗೆ ಇರುವುದಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ನಾವು ಚೆನ್ನಾಗಿ ಕಾಣಬೇಕು ಎಂದುಕೊಳ್ಳುವುದು ಸಹಜ. ಅದಕ್ಕಾಗಿಯೆ ಅನೇಕ ಸೌಂದರ್ಯ ವರ್ಧಕಗಳನ್ನ ಬಳಸುತ್ತಾರೆ. ಅಂತಹ ಸೌಂದರ್ಯ ವರ್ಧಕಗಳಲ್ಲಿ ಕಾಡಿಗೆ ಕೂಡ ಮುಖ್ಯವಾದದ್ದು.
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣವಿದ್ದಂತೆ. ಕಾಡಿಗೆಯನ್ನ ಹಚ್ಚುವ ಮೂಲಕ ಕಾಂತಿಯುತ, ಹೊಳಪಾದ ಹಾಗೂ ದುಂಡಾದ ಕಣ್ಣುಗಳನ್ನ ಪಡೆಯಬಹುದಾಗಿದ್ದು, ಅದು ಹೆಂಗಳೆಯರನ್ನ ಹಾಗೂ ಹಾಲು ಗಲ್ಲದ ಹಸು ಕಂದಮ್ಮಗಳನ್ನ ಚಂದಿರಂತೆ ಕಂಗೊಳಿಸುವಂತೆ ಮಾಡುತ್ತದೆ.
ಕಾಡಿಗೆಯು ನಮ್ಮ ಕಣ್ಣುಗಳನ್ನು ಸುಂದರವಾಗಿಸುವುದಲ್ಲದೇ, ಮುಖಕ್ಕೆ ಒಂದು ಪರಿಪೂರ್ಣ ನೋಟವನ್ನು ನೀಡುತ್ತದೆ. ಕಣ್ಣುಗಳ ಆಕಾರ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಕಾಡಿಗೆ ಹಚ್ಚುವುದರಿಂದ ಕಣ್ಣುಗಳು ಮತ್ತಷ್ಟು ಸುಂದರವಾಗಿ ಕಾಣುತ್ತವೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಜಲ್ ಅನ್ನು ಪ್ರತಿದಿನ ಹಚ್ಚುವುದರಿಂದ ಕಣ್ಣುಗಳಿಗೆ ಹಲವಾರು ರೀತಿಯ ಹಾನಿ ಉಂಟಾಗುತ್ತದೆ ಎನ್ನುವ ಪುಟ್ಟ ಅರಿವು ನಿಮಗಿರಲಿ.
ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಕಾಜಲ್, ಐ ಲೈನರ್, ಮಸ್ಕರ್ ಗಳು ರಾಸಾಯನಿಕಗಳಿಂದ ಕೂಡಿರುತ್ತವೆ. ಇದರಿಂದಾಗಿ ಕಣ್ಣುಗಳಿಗೆ ಅಲರ್ಜಿ ಉಂಟಾಗುತ್ತವೆ. ಅಷ್ಟೇ ಅಲ್ಲದೆ ಇದನ್ನು ಪ್ರತಿದಿನ ಹಚ್ಚಿದರೆ ಅನೇಕ ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು.
ಕಣ್ಣುಗಳಿಗೆ ಯಾವುದೇ ತೊಂದರೆಯು ಆಗದಂತೆ ನಮ್ಮ ಕಣ್ಣಿನ ಸೌಂದರ್ಯ ಇಮ್ಮಡಿಗೊಳಿಸುವ ಕಾಡಿಗೆಯನ್ನ ನಾವೇ ಮನೆಯಲ್ಲಿ ನೈಸರ್ಗಿಕವಾಗಿ ತಯಾರಿಸಿ ಕೊಳ್ಳಬಹುದಾಗಿದೆ.
ಮನೆಯಲ್ಲಿ ತಯಾರಿಸಿದ ಕಾಜಲ್ ನೈಸರ್ಗಿಕವಾಗಿದ್ದು, ಕಣ್ಣುಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಹಾಗಾದರೆ ಮನೆಯಲ್ಲಿ ಕಾಜಲ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನ ತಿಳಿಯಲು ಈ ಲೇಖನ ನಿಮಗೆ ತುಂಬಾ ಸಹಾಯಕ ವಾಗಿದೆ.
ಕಾಜಲ್ ತಯಾರಿಸಲು ಬೇಕಾದ ಸಾಮಗ್ರಿಗಳು:
ವಿಧಾನ 1
1) ಒಂದು ತಟ್ಟೆ
2)ಒಂದು ದೊಡ್ಡ ಚಮಚ
3)ತುಪ್ಪ
4)ಮಣ್ಣಿನ ದೀಪ
5)ಬತ್ತಿ
6)ಕೊಬ್ಬರಿ ಎಣ್ಣೆ
ಮಾಡುವ ವಿಧಾನ
1)ಕಾಡಿಗೆ ತಯಾರಿಸಲು ಮೊದಲು ಒಂದು ದೀಪವನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕಿ, ದೀಪವನ್ನು ಬೆಳಗಿಸಿ.
2)ಅದನ್ನು ಒಂದು ತಗ್ಗು ಪ್ರದೇಶದಲ್ಲಿ ಇರಿಸಿ ಅದರ ಮೇಲೆ ಒಂದು ಬಟ್ಟಲನ್ನುಸ್ವಲ್ಪ ಅಂತರದಲ್ಲಿ ಉಲ್ಟಾ ಹಾಕಿ. ನೆನಪಿಡಿ ಬಟ್ಟಲನ್ನ ಸಂಪೂರ್ಣವಾಗಿ ದೀಪಕ್ಕೆ ಮುಚ್ಚಬಾರದು ಜೊತೆಗೆ ದೀಪದಿಂದ ಹೆಚ್ಚು ದೂರವೂ ಇರಬಾರದು.
3)20 ರಿಂದ 30 ನಿಮಿಷಗಳ ಕಾಲ ದೀಪ ಉರಿದ ನಂತರ, ತಟ್ಟೆಯಲ್ಲಿ ಕಪ್ಪು ಬಣ್ಣದ ಮಸಿ ಶೇಖರಣೆ ಆಗಿರುತ್ತದೆ.
4)ಈ ಮಸಿಯನ್ನು ಚಮಚದ ಸಹಾಯದಿಂದ ಕೆರೆದು ಪುಟ್ಟ ಡಬ್ಬಿಗೆ ತುಂಬಿ.
5) ಒಂದು ಹನಿ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಕಲಸಿ.
ಹೀಗೆ ಮಾಡಿದರೆ, ನಿಮ್ಮ ದೇಸಿ ಕಾಜಲ್ ರೆಡಿ. ಈ ಕಾಜಲ್ ನಿಮ್ಮ ಕಣ್ಣಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.
ವಿಧಾನ: 2
ಬೇಕಾಗುವ ಪದಾರ್ಥಗಳು:
1)ಬಾದಾಮಿ
2)ಬತ್ತಿ
3)ಹರಳೆಣ್ಣೆ
4)ತುಪ್ಪ
ತಯಾರಿಸುವ ವಿಧಾನ:
ಮೊದಲು ಒಂದು ದೀಪದ ಕಂಬವನ್ನು ತೆಗೆದುಕೊಂಡು ಇದಕ್ಕೆ ಹರಳೆಣ್ಣೆ ಹಾಕಬೇಕು. ಹತ್ತಿಯ ಬತ್ತಿಯ ಸಹಾಯದಿಂದ ದೀಪ ಹೊತ್ತಿಸಿ, ದೀಪದ ಜ್ವಾಲೆಯಿಂದ ಬಾದಾಮಿಯನ್ನು ಸಂಪೂರ್ಣವಾಗಿ ಸುಡಬೇಕು. ಇದು ಸುಟ್ಟು ಕರಕಲು ಆದ ಬಳಿಕ, ತಣ್ಣಗಾಗಲು ಬಿಡಬೇಕು. ಆನಂತರ, ಇದನ್ನು ಚೆನ್ನಾಗಿ ನುಣ್ಣಗೆ ಪುಡಿ ಮಾಡಿ, ಜರಡಿ ಮಾಡಿಕೊಂಡು, ಇದಕ್ಕೆ ಸ್ವಲ್ಪ ತುಪ್ಪ ಬೆರೆಸಿ, ಕಲೆಸಿ, ಆನಂತರ ಒಂದು ಡಬ್ಬಿಯಲ್ಲಿ ತೆಗೆದಿಟ್ಟುಕೊಂಡರೆ, ಎರಡರಿಂದ ಮೂರು ತಿಂಗಳವರೆಗೆ ಇದನ್ನು ಉಪಯೋಗಿಸಬಹುದು.
ನೈಸರ್ಗಿಕ ಕಾಡಿಗೆಯ ಉಪಯೋಗಗಳು
ಹರಳೆಣ್ಣೆ, ತುಪ್ಪ ಬಾದಾಮಿಯಂತಹ ವಸ್ತುಗಳನ್ನ ಬಳಸಿರುವುದರಿಂದ ಕಣ್ಣಿಗೆ ತಂಪನ್ನ ನೀಡಲು ಸಹಕಾರಿಯಾಗಿದೆ.
ಕಣ್ಣಿನ ಸೋಂಕು ಬಾರದಂತೆ ತಡೆಯುವಲ್ಲಿ ಕಾಜಲ್ ಉಪಯೋಗಕಾರಿ.
ಕಾಡಿಗೆ ಹಚ್ಚುವ ಮೂಲಕ ಕಣ್ಣನ್ನ ಆಯಾಸ ಮುಕ್ತವನ್ನಾಗಿಸಿ ಆರಾಮಾದಾಯವಾಗಿ ಇರುವಂತೆ ಮಾಡುತ್ತವೆ.
ಡಾರ್ಕ್ ಸರ್ಕಲ್ ಮರೆಮಾಚುವಂತೆ ಮಾಡಿ ಕಣ್ಣಿನ ಅಂದವನ್ನ ಹೆಚ್ಚಿಸುತ್ತದೆ.
ಹೀಗೆ ಕೆಲವು ನೈಸರ್ಗಿಕ ಪದಾರ್ಥಗಳನ್ನ ಬಳಸಿಕೊಂಡು ಮನೆಯಲ್ಲೆ ಕಾಡಿಗೆ ತಯಾರಿಕೊಳ್ಳುವ ಮೂಲಕ ನಿಮ್ಮ ಅಂದವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.
ವಿನುತಾ ಹೆಚ್.ಎಲ್. ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews