ವ್ಯಾಪಕ ಮಳೆ ಹಿನ್ನೆಲೆ ಉತ್ತರಕನ್ನಡ ಶಾಲಾ ಕಾಲೇಜುಗಳಿಗೆ ರಜೆ ! ಸಾರ್ವಜನಿಕರಿಗೆ ಜಿಲ್ಲಾಧಿಕಾರಿಯಿಂದ ಮುನ್ನೆಚ್ಚರಿಕೆ
ಉತ್ತರ ಕನ್ನಡ: ವ್ಯಾಪಕ ಮಳೆಯಾಗುತ್ತಿದ್ದು ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗದ ಕೆಲ ತಾಲೂಕುಗಳಲ್ಲಿ ತಡರಾತ್ರಿಯಿಂದ ಭಾರೀ ಮಳೆಯಾಗುತ್ತಿರುವ ಕಾರಣ ಕರಾವಳಿಯ ಕೆಲ ತಗ್ಗು ಪ್ರದೇಶಗಳು ಸೇರಿದಂತೆ ಕಾರವಾರ ನಗರದ ಗ್ರೀನ್ ಸ್ಟ್ರೀಟ್ ರಸ್ತೆ, ಹೈಚರ್ಚ್ ಬಳಿ, ಹಬ್ಬುವಾಡ ರಸ್ತೆ, ಪದ್ಮನಾಭನಗರ ಜಲಾವೃತಗೊಂಡಿದೆ.
ಅಲ್ಲದೇ ಅರಗಾ ಚೆಂಡಿಯಾ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮಳೆ ಇರುವ ಕಾರಣ ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮೀನುಗಾರರು ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಲು ಮೀನುಗಾರಿಕೆ ಇಲಾಖೆಗೆ ತಿಳಿಸಿದೆ.
ಮಳೆ - ಗಾಳಿ ಬೀಸುವ ಸಂದರ್ಭದಲ್ಲಿ ಮಕ್ಕಳು ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೇ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಆಯಾ ತಾಲೂಕು ಆಡಳಿತವನ್ನು ಇಲ್ಲವೇ ಹೆಲ್ಪ್ ಲೈನ್ 1077, 08284-282723, 7483628982. 8867839350, 08284-295959, 08382-229857 ಸಂಪರ್ಕಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಜೋಯಿಡಾ ಈ ಪ್ರದೇಶಗಳ ಶಾಲೆ, ಪದವಿ ಪೂರ್ವ ಕಾಲೇಜು, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ.
Post a comment
Log in to write reviews