ಭಾರತ
ದೆಹಲಿ- ವಡೋದರ ಎಕ್ಸ್‌ಪ್ರೆಸ್‌ವೇಯಲ್ಲಿ ಗಾಳಿಗೆ ತೇಲಿದ ವಾಹನ
ನವದೆಹಲಿ: ಅನಿರೀಕ್ಷಿತವಾಗಿ ದೆಹಲಿ- ವಡೋದರ ಎಕ್ಸ್‌ಪ್ರೆಸ್‌ವೇಯಲ್ಲಿ ಸಾಗುತ್ತಿದ್ದ ವಾಹನವೊಂದು ಗಾಳಿಯಲ್ಲಿ ಹಾರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕಾಮಗಾರಿ ವೇಳೆ ನಡೆದಿರುವ ಲೋಪದಿಂದ ಈ ರೀತಿ ಆಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಗುತ್ತಿಗೆದಾರನಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಅಧಿಕಾರಿಗಳನ್ನು ವಜಾಗೊಳಿಸಿದೆ.
ಸಚಿವಾಲಯದ ಪ್ರಕಟಣೆ ಪ್ರಕಾರ, ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳು ಮತ್ತು ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2024ರ ಸೆಪ್ಟೆಂಬರ್ 7ಕ್ಕೆ ಮುಂಚೆ ಚಿತ್ರೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ 10ರ ನಂತರ ಅಪ್ಲೋಡ್ ಮಾಡಲಾಗಿದ್ದು, ಈ ಘಟನೆ ದೆಹಲಿ ವಡೋದರಾ ಎಕ್ಸ್‌ಪ್ರೆಸ್‌ವೇಯ ಪ್ಯಾಕೇಜ್ 9ಕ್ಕೆ ಸಂಬಂಧಿಸಿದೆ ಎಂದು ಅವರು ತಿಳಿಸಿದರು.
ಎಕ್ಸ್‌ಪ್ರೆಸ್‌ವೇಯಲ್ಲಿ ಹಲವಾರು ಕಾರುಗಳು ಬ್ಯಾರಿಕೇಡ್‌ಗಳನ್ನು ಸಮೀಪಿಸುತ್ತಿದ್ದಂತೆ ಗಾಳಿಯಲ್ಲಿ ಹಾರಿರುವ ವಿಡಿಯೋ ತೋರಿಸಲಾಗಿದೆ. ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಇಲ್ಲದೇ ಇದ್ದರೂ ರಸ್ತೆಯಲ್ಲಿ ಸರಾಗವಾಗಿ ಸಾಗುತ್ತಿರುವ ಪ್ರತಿಯೊಂದು ವಾಹನವೂ ಇಂಡೆಂಟೇಶನ್ ಹೊಡೆಯುವುದು ಕಂಡಿದೆ. ಈ ಸಂದರ್ಭದಲ್ಲಿ ಕಾರುಗಳು ಗಾಳಿಯಲ್ಲಿ ಹಾರಿ ನೆಲದ ಮೇಲೆ ಜಿಗಿತವನ್ನು ನಡೆಸಿವೆ. ಆದರೆ, ಅದೃಷ್ಟವಶಾತ್ ಪಲ್ಟಿಯಾಗುವುದಿಲ್ಲ. ಈ ಹಿನ್ನಲೆ ಗುತ್ತಿಗೆದಾರರಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೇ ಕಳಪೆ ಮೇಲ್ವಿಚಾರಣೆ ಮತ್ತು ಸೇವೆಗಳಲ್ಲಿನ ಲೋಪದ ಕಾರಣದಿಂದ ಪ್ರಾಧಿಕಾರದ ಇಂಜಿನಿಯರ್‌ನ ಟೀಮ್ ಲೀಡರ್ ಕಮ್ ರೆಸಿಡೆಂಟ್ ಇಂಜಿನಿಯರ್ ಅವರನ್ನು ವಜಾಗೊಳಿಸಲಾಗಿದೆ. ಸಂಬಂಧಿಸಿದಂತೆ ಸೈಟ್ ಇಂಜಿನಿಯರ್ ಅವರನ್ನು ವಜಾಗೊಳಿಸಲಾಗಿದೆ. ಹಾಗೇ ಪಿಡಿ ಮತ್ತು ಮ್ಯಾನೇಜರ್ (ಟೆಕ್)ಗೆ ಕೂಡ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ವಿಡಿಯೋದಲ್ಲಿರುವ ಸ್ಥಳವನ್ನು ಪತ್ತೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನಲೆ ತಕ್ಷಣಕ್ಕೆ ಪೂರ್ಣ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಆದರೆ, ತಾತ್ಕಲಿಕ ದುರಸ್ತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಂತರ ಶಾಶ್ವತ ದುರಸ್ತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಐಐಟಿ ಖರಗ್‌ಪುರ ಪ್ರೊ.ಕೆ.ಎಸ್. ರೆಡ್ಡಿ ಮತ್ತು ಐಐಟಿ ಗಾಂಧಿನಗರ ಪ್ರೊ.ಜಿ.ವಿ. ರಾವ್ ಒಳಗೊಂಡ ತಂಡವನ್ನು ತನಿಖೆಗೆ ರಚಿಸಲಾಗಿದ್ದು, ಇದಕ್ಕೆ ಕಾರಣಗಳು ಮತ್ತು ಪರಿಹಾರ ತಿಳಿಸುವಂತೆ ಸೂಚಿಸಲಾಗಿದೆ.
Post a comment
Log in to write reviews