ಲವರ್ಗೆ ಗಾಡಿ ಕೊಡಿಸಲು ಓನರ್ ಆಂಟಿಯನ್ನೇ ಕೊಲೆ ಮಾಡಿ ಚಿನ್ನದ ಸರ ಕದ್ದ ಯುವತಿ : ಬೆಂಗಳೂರು
ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆ ಕತ್ತು ಹಿಸುಕಿ ಕೊಲೆಗೈದ ಘಟನೆ ನಡೆದಿತ್ತು. ಸದ್ಯ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮನೆಯಲ್ಲಿ ಬಾಡಿಗೆ ಇದ್ದ ಯುವತಿಯೇ ತನ್ನ ಲವರ್ಗೆ ಗಾಡಿ ಕೊಡಿಸಲು ಕೊಲೆ ಮಾಡಿದ್ದಾಳೆ ಎಂಬುದು ಪತ್ತೆಯಾಗಿದೆ.
ಮೇ 10 ರಂದು 36 ವರ್ಷದ ದಿವ್ಯಾ ಕೊಲೆಯಾದ ಮನೆ ಓನರ್. ಸಲೂನ್ ಶಾಪ್ ಹೊಂದಿರುವ ಗುರುರಾಜ್, ಪತ್ನಿ ದಿವ್ಯಾ ಜತೆ ಕೋನಸಂದ್ರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ದಿವ್ಯಾ ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದರು. ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರು ದಿವ್ಯಾ ಅವರ ಮನೆಯ ಮೇಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೋನಿಕಾ ಎಂಬ ಯುವತಿಯನ್ನು ಬಂಧಿಸಿದ್ದಾರೆ.
ಕೋಲಾರ ಮೂಲದ ಮೋನಿಕಾ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಕಳೆದ ಮೂರು ತಿಂಗಳಿಂದ ಮೃತೆ ದಿವ್ಯಾ ಮನೆಯಲ್ಲಿ ಬಾಡಿಗೆಯಿದ್ದಳು. ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಕೆಲಸ ತೊರೆದಿದ್ದಳು. ಬಳಿಕ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.
Post a comment
Log in to write reviews