ಕರ್ನಾಟಕ
1,000 ಕೆಜಿ ಭಾರ ಹೊರಿಸಿ ಅಭಿಮನ್ಯು ಆನೆಗೆ ತಾಲೀಮು
ಮೈಸೂರು: ಅಭಿಮನ್ಯು ಆನೆಗೆ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಮರದ ಅಂಬಾರಿಯನ್ನು ಹೊರಿಸಿ ಜಂಬೂ ಸವಾರಿಯ ದಿನ ಬುಧವಾರ ಸಂಜೆ ತಾಲೀಮು ನಡೆಸಲಾಯಿತು. ಜಂಬೂ ಸವಾರಿ ನಡೆಸುವ ಮುನ್ನ ಸಾಂಪ್ರದಾಯಿಕ ಪೂಜೆ ನೇರವೇರಿತು.
ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಯಲ್ಲಿ ಬೀಡು ಬಿಟ್ಟಿದ್ದು, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತಿನಿತ್ಯ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ತಾಲೀಮಿನೊಂದಿಗೆ ಗಜಪಡೆಗೆ ವಿಶೇಷ ಆಹಾರ ನೀಡಲಾಗುತ್ತಿದೆ ಎನ್ನಲಾಗಿದೆ.
ಚಿನ್ನದ ಅಂಬಾರಿ ಕಟ್ಟುವ ಸ್ಥಳದಲ್ಲಿ ಮರದ ಅಂಬಾರಿ, ಗಾದಿ ಹಾಗೂ ಮರಳಿನ ಮೂಟೆ ಸೇರಿದಂತೆ 1,000 ಕೆ.ಜಿ ಭಾರವನ್ನು ಅಭಿಮನ್ಯುವಿನ ಹೆಗಲ ಮೇಲಿರಿಸಿ ಬುಧವಾರ ಸಂಜೆ ಕಸರತ್ತು ನಡೆಸಲಾಯಿತು.
ಮರದ ಅಂಬಾರಿ ಕಟ್ಟುವ ಮುನ್ನ ಗಣೇಶ ಮೂರ್ತಿಯನ್ನಿಟ್ಟು, ಗಣಪತಿ ಪೂಜೆ ನೇರವೇರಿಸಿ ಬಳಿಕ ಅಂಬಾರಿಯನ್ನು ಕ್ರೇನ್ ಮೂಲಕ ಕಟ್ಟಲಾಯಿತು. ಅಭಿಮನ್ಯು ಆನೆಯ ಬಲಭಾಗಕ್ಕೆ ಲಕ್ಷ್ಮೀ ಎಡಭಾಗಕ್ಕೆ ಇದೇ ಮೊದಲ ಬಾರಿಗೆ ಹಿರಣ್ಯ ಹೆಣ್ಣಾನೆಯನ್ನು ಕುಮ್ಕಿ ಆನೆಯಾಗಿ ನಿಲ್ಲಿಸಲಾಯಿತು.
ಬಳಿಕ ಅರಮನೆಗೆ ಒಂದು ಸುತ್ತು ಹಾಕಿ ಉತ್ತರ ದ್ವಾರದ ಮೂಲಕ ಮರದ ಅಂಬಾರಿ ಹೊತ್ತು ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿದವು. ಸುಮಾರು 12 ಕಿಲೋ ಮೀಟರ್ ದೂರವನ್ನು ಒಂದು ಗಂಟೆ ಮೂವತ್ತು ನಿಮಿಷಗಳ ಅವಧಿಗೆ ಅಭಿಮನ್ಯು ಕ್ರಮಿಸಿತು.
ಈ ಕುರಿತು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, "ದಸರಾದಲ್ಲಿ ಭಾಗವಹಿಸುವ ಗಜಪಡೆಗೆ ವಿವಿಧ ತಾಲೀಮು ನಡೆಸಲಾಗುತ್ತಿದೆ. ಚಿನ್ನದಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿ ಇರಿಸಿ ಪ್ರತೀ ವರ್ಷದಂತೆ ತಾಲೀಮು ನಡೆಸಲಾಯಿತು. ಸಾಕಷ್ಟು ಅನುಭವವಿರುವ ಅಭಿಮನ್ಯು ಇತರ ಗಜಪಡೆಗಳೊಂದಿಗೆ ಮರದ ಅಂಬಾರಿ ಹೊತ್ತು ಸಾಗಿತು. ಮುಂದಿನ ದಿನಗಳಲ್ಲಿ ಮಹೇಂದ್ರ, ಧನಂಜಯ, ಸುಗ್ರೀವಾ, ಗೋಪಿ ಹಾಗೂ ಭೀಮ ಆನೆಗಳಿಗೂ ಮರದ ಅಂಬಾರಿ ತಾಲೀಮು ನಡೆಸಲಾಗುವುದು. ಸಿಡ್ಡಿಮದ್ದು ತಾಲೀಮಿನ ಬಗ್ಗೆ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಮಾಹಿತಿ ನೀಡಿದರು.
Post a comment
Log in to write reviews