ಬ್ರಿಟಿಷರ ಕಾಲದಲ್ಲಿ ನೀಡಲಾಗಿದ್ದ ಗುತ್ತಿಗೆ ಭುಮಿಯನ್ನು ಮರುಪಡೆಯಲು ಕ್ರಮ ವಹಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು, ಚಾಮರಾಜನಗರ, ಮೈಸೂರು ಭಾಗದಲ್ಲಿ ಸುಮಾರು 7500 ಎಕರೆ ಅರಣ್ಯ ಭೂಮಿಯನ್ನು ವಿವಿಧ ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ಕಂಪನಿಗಳಿಂದ ಸುಮಾರು 2 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅವಧಿ ಮುಗಿದ ಭೂಮಿ ಮರು ಪಡೆಯಲು ಕ್ರಮ ವಹಿಸಲಾಗಿದೆ ಎಂದರು.
ವನ್ಯಜೀವಿ ಆವಾಸಸ್ಥಾನ ಅಭಿವೃದ್ಧಿಗೆ ಕ್ರಮ
ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿದ್ದು, ವನ್ಯಜೀವಿಗಳ ಆವಾಸಸ್ಥಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಲಾಂಟನಾ, ಸೆನ್ನಾ ಮೊದಲಾದ ಕಳೆ ತೆಗೆಯುವುದು, ಹುಲ್ಲುಗಾವಲು ಅಭಿವೃದ್ಧಿ, ಜಲ ಮೂಲಗಳ ಅಭಿವೃದ್ಧಿಯೂ ಸೇರಿದೆ ಎಂದರು.
ಮಾನವ-ವನ್ಯಜೀವಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್, ಆನೆ ನಿರೋಧಕ ಕಂದಕ, ಸೌರ ತಂತಿಬೇಲಿ ಅಳವಡಿಕೆ ಕಾರ್ಯವನ್ನು ಆದ್ಯತೆಯ ಮೇಲೆ ನಿರ್ವಹಿಸಲಾಗುತ್ತಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಗುರಿಯನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ 101 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಾಡಾನೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 324 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದ್ದು, ಇದಕ್ಕಾಗಿ ವಾರ್ಷಿಕ 250 ಕೋಟಿ ರೂ. ಅನುದಾನದೊಂದಿಗೆ ಎರಡು ವರ್ಷದಲ್ಲಿ 500 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
Post a comment
Log in to write reviews