ಬೆಂಗಳೂರು: ಹಾಡುಗಳ ಕಾಪಿರೈಟ್ ಉಲ್ಲಂಘನೆ (Copy Right Violation) ಆರೋಪದಲ್ಲಿ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ವಿರುದ್ಧ ದಾಖಲಾಗಿದ್ದ ಎಫ್ಐಆರ್ (FIR) ಪ್ರಕರಣಕ್ಕೆ ಸಂಬಂಧಿಸಿ, ಯಶವಂತಪುರ ಪೊಲೀಸರ ಎದುರು ವಿಚಾರಣೆಗೆ ನಟ ರಕ್ಷಿತ್ ಶೆಟ್ಟಿ ಹಾಜರಾಗಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಹಾಗೂ ಅವರ ಒಡೆತನದ ಪರಂವಹ ಸ್ಟುಡಿಯೋ ಮೇಲೆ ಎಫ್ಐಆರ್ ದಾಖಲಾಗಿತ್ತು. ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ʼಗಾಳಿಮಾತುʼ ಹಾಗು ʼನ್ಯಾಯ ಎಲ್ಲಿದೆʼ ಎಂಬ ಸಿನಿಮಾದ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಆರೋಪ ಅವರ ಮೇಲಿದೆ. ʼನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಮತ್ತು ʼಒಮ್ಮೆ ನಿನ್ನನ್ನೂ ಕಣ್ತುಂಬ ನೋಡುವಾಸೆʼ ಎಂಬ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಎಂಬವರು ದೂರು ಸಲ್ಲಿಸಿದ್ದರು.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಎರಡು ಹಾಡು ಅನುಮತಿಯಿಲ್ಲದೆ ಬಳಕೆ ಮಾಡಿಕೊಂಡ ಆರೋಪದ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಸಿನಿಮಾ ತೆರೆ ಕಾಣುವುದಕ್ಕೂ ಮುನ್ನ MRT ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ರಕ್ಷಿತ್ ಉತ್ತರ ನೀಡಿದ್ದಾರೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನಾವು ಹಾಡು ಬಳಕೆ ಮಾಡುವ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂಆರ್‌ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆ ಎಂದು ಉತ್ತರಿಸಿರುವ ರಕ್ಷಿತ್ ಶೆಟ್ಟಿ, ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳನ್ನು ತೋರಿಸಿದ್ದಾರೆ. ಚಿತ್ರದಲ್ಲಿ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Post a comment
Log in to write reviews