ಬೆಂಗಳೂರು: ಕಾಮೆಡ್ ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫಲಿತಾಂಶ ಮೇ 24ರ ಶುಕ್ರವಾರ ಮಧ್ಯಾಹ್ನ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ.
ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್ ಕಾಲೇಜು, ದೇಶದ ಕೆಲವು ಕಡೆ ಇರುವ 40 ಖಾಸಗಿ ವಿವಿಗಳಲ್ಲಿನ ಸುಮಾರು 22 ಸಾವಿರ ಎಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಗಾಗಿ ಈ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 1,03,799 (ಶೇಕಡಾ 87.96) ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
2024ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 12 ರಂದು ಪರೀಕ್ಷೆ ನಡೆದಿತ್ತು. ಕಾಮೆಡ್ ಕೆ ಕೀ ಉತ್ತರಗಳನ್ನು ಮೇ 21ರಂದು ಬಿಡುಗಡೆ ಮಾಡಿತ್ತು. ದೇಶಾದ್ಯಾಂತ 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಎಂಜಿನಿಯರಿಂಗ್ ಯುಜಿ ಸೀಟುಗಳನ್ನು ಕೋರಿ 1,18,005 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸುಮಾರು 1,03,799 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
Post a comment
Log in to write reviews