ನವದೆಹಲಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಬಂಧ ಉಗ್ರನೋರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ.
ಮೂವತ್ತೈದು ವರ್ಷದ ಶೋಯೆಬ್ ಅಹ್ಮದ್ ಮಿರ್ಜಾ( ಛೋಟು) ಬಂಧಿತ. ಈತ ಹುಬ್ಬಳ್ಳಿ ನಗರದ ನಿವಾಸಿ. ಕೆಫೆ ಸ್ಫೋಟ ಪ್ರಕರಣದಲ್ಲಿ ಈತ ಐದನೇ ಆರೋಪಿ. ಈತ ಈ ಹಿಂದೆ 2018ರಲ್ಲಿ ನಡೆದ ಎಲ್‌ಇಟಿ ಬೆಂಗಳೂರು ಪಿತೂರಿ ಪ್ರಕರಣದಲ್ಲಿ ಅಪರಾಧಿಯಾಗಿದ್ದ. ಜೈಲಿನಿಂದ ಹೊರಬಂದ ನಂತರ ಈ ಹೊಸ ಸಂಚಿನಲ್ಲಿ ಭಾಗಿಯಾಗಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
ಕೆಫೆ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಮಥೀನ್ ತಹಾ ಅವರೊಂದಿಗೆ ಸ್ನೇಹ ಬೆಳೆಸಿದ್ದಲ್ಲದೆ ವಿದೇಶದ ಶಂಕಿತ ಆನ್‌ಲೈನ್ ಹ್ಯಾಂಡ್ಲರ್‌ಗೆ ಪರಿಚಯಿಸಿದ್ದ ಎನ್ನಲಾಗಿದೆ. ಮಿರ್ಜಾ ಹ್ಯಾಂಡ್ಲರ್ ಮತ್ತು ಅಬ್ದುಲ್ ಮಥೀನ್ ತಾಹಾ ನಡುವೆ ಎನ್‌ಕ್ರಿಪ್ಟ್ ಮಾಡಿದ ಸಂವಹನಕ್ಕಾಗಿ ಇ-ಮೇಲ್ ಐಡಿ ಒದಗಿಸಿದ್ದ. ಏಪ್ರಿಲ್ 12 ರಂದು ಕೋಲ್ಕತ್ತಾದ ತನ್ನ ಅಡಗುತಾಣದಿಂದ ಸಹ-ಆರೋಪಿ ಮುಸ್ಸಾವಿರ್ ಹುಸೇನ್ ಶಾಜಿಬ್ ಜೊತೆಗೆ ಮಥೀನ್ ನನ್ನು ಬಂಧಿಸಲಾಗಿತ್ತು.
ಮಾರ್ಚ್ 1ರಂದು ನಡೆದ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ಸಂಬಂಧ ಇಲ್ಲಿಯವರೆಗೆ ಎನ್‌ಐಎ ದೇಶಾದ್ಯಂತ 29 ಸ್ಥಳಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದು ಒಟ್ಟು ಐವರನ್ನು ಬಂಧಿಸಲಾಗಿದೆ.
Post a comment
Log in to write reviews