ಬಿಟ್ ಕಾಯಿನ್ ಆರೋಪಿ ಡಿವೈಎಸ್‌ಪಿ ಶ್ರೀಧರ್ ಕೆ.ಪೂಜಾರ್‌ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ರಾಜ್ಯ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ.ಪೂಜಾರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶ್ರೀಧರ್ ಪೂಜಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನ್ಯಾಯ ಪೀಠ ಆದೇಶ ಮಾಡಿದೆ. ತನಿಖಾಧಿಕಾರಿಗೆ ಕರೆದಾಗ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ಇದೇ ವೇಳೆ ಸೂಚಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಎರಡೆರಡು ಭಾರಿ ಎಫ್‌ಐಆರ್ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿತು.
ಅರ್ಜಿದಾರರ ಪರ ವಾದ:
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರು ಬದಲಾವಣೆಯಾದಾಗ ಹಳೆಯ ತಂಡದ ಪೊಲೀಸರ ವಿರುದ್ಧ ಹೊಸ ತಂಡದ ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ದಾಖಲಿಸಿರುವುದು ಎರಡನೇ ಎಫ್‌ಐಆರ್ ಇದಾಗಿದೆ. ಒಂದು ಎಫ್‌ಐಆರ್‌ನಲ್ಲಿ ಹೈಕೋರ್ಟ್ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಆದೇಶ ಮಾಡಿದ ನಂತರ ಎಸ್‌ಐಟಿ ಎರಡನೇ ಎಫ್‌ಐಆರ್ ದಾಖಲಿಸಿದೆ. ಈಗಾಗಲೇ ಪ್ರಕರಣ ಸಂಬಂಧ ಬಂಧಿಸಿರುವ ಮೂವರು ಆರೋಪಿಗಳಿಂದ ಯಾವುದೇ ಪರಿಕರ ವಶಕ್ಕೆ ಪಡೆದಿಲ್ಲ. ಅರ್ಜಿದಾರರ ಮೇಲೆ ಇತರ ಆರೋಪಿಗಳು ಯಾವುದೇ ಹೆಳಿಕೆ ನೀಡಿಲ್ಲ ಎಂದು ವಿವರಿಸಿದರು. ಅಲ್ಲದೇ, ಪ್ರಕರಣ ನಡೆದ ನಾಲ್ಕು ವರ್ಷಗಳ ನಂತರ ಅರ್ಜಿದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ತನಿಖೆಯಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ. ಈಗಾಗಲೆ ಪ್ರಕರಣ ಸಂಬಂಧ ಅರ್ಜಿದಾರರು ತನಿಖಾಧಿಕಾರಿಗೆ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ಸದ್ಯ ಅವರನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಒಂದೊಮ್ಮೆ ಪೂಜಾರ್ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದರು.
Post a comment
Log in to write reviews