ಹಾವೇರಿ: ನಟ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿಯೊಬ್ಬರು, ತಮ್ಮ ಮನೆಯ ಆವರಣದಲ್ಲೇ ಅವರಿಗೊಂದು ದೇವಸ್ಥಾನ ಕಟ್ಟಿಸಿರುವ ಅಪರೂಪದ ಘಟನೆಯೊಂದು ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರಕಾಶ್ ವೃತ್ತಿಯಲ್ಲಿ ಡ್ಯಾನ್ಸ್ ಮಾಸ್ಟರ್. ಪ್ರಕಾಶ್‌ಗೆ ನಟ ಡಾ. ಪುನೀತ್ ರಾಜ್ಕುಮಾರ್ ಎಂದರೆ ಪಂಚಪ್ರಾಣವಾಗಿದ್ದು, ಜೊತೆಗೆ ನಟಿಸಬೇಕೆಂಬುದು ಅವರ ಅದಮ್ಯ ಆಸೆಯಾಗಿತ್ತು. ಈ ಆಸೆಯನ್ನು ಪುನೀತ್ ಅವರಿಗೆ ತಿಳಿಸಿ, ಅವರೊಂದಿಗೆ ನಟಿಸಬೇಕೆಂದು ಹಲವು ಬಾರಿ ಪುನೀತ್ರ ಭೇಟಿಗೆ ತೆರಳಿದ್ದರು. ಆದರೆ, ಅವರನ್ನು ಭೇಟಿಯಾಗುವ ಅವಕಾಶ ಕೊನೆಗೂ ಪ್ರಕಾಶ್‌ಗೆ ಸಿಕ್ಕಿರಲಿಲ್ಲ. ಕೊನೆಗೆ ದೂರದಿಂದಲೇ ಅವರನ್ನು ನೋಡಿದ ತೃಪ್ತಿಯಿಂದ ಮನೆಗೆ ಮರಳಿದ್ದರು. ಇದೀಗ ಪ್ರಕಾಶ್, ತಮ್ಮ ನೆಚ್ಚಿನ ನಟ ಪುನೀತ್‌ರ ನೆನಪಿಗಾಗಿ ಮನೆಯ ಆವರಣದಲ್ಲಿ ಅವರಿಗೊಂದು ದೇವಸ್ಥಾನ ಕಟ್ಟಿಸಿ ಸುದ್ದಿಯಾಗಿದ್ದಾರೆ.
ಆದರೆ ಅವರ ಜೊತೆ ನಟಿಸಬೇಕೆಂಬ ಆಸೆ ಇನ್ನೂ ಜೀವಂತವಾಗಿತ್ತು. ಪುನೀತ್ ರಾಜ್ ಕುಮಾರ್ ಅಗಲಿದ್ದು, ಪ್ರಕಾಶ್ ಕನಸು ನುಚ್ಚುನೂರು ಮಾಡಿತ್ತು. "ಪುನೀತ್ ರಾಜ್ಕುಮಾರ್ ನನ್ನ ದೇವರು. ಅವರು ನಮ್ಮ ಜೊತೆಗೆ ಇದ್ದಾರೆ. ದೇವರ ಜೊತೆ ನಟಿಸದಿದ್ದರೇನಾಯಿತು?, ನನ್ನ ದೇವರಿಗೆ ನಮ್ಮ ಮನೆಯ ಆವರಣದಲ್ಲಿ ದೇವಸ್ಥಾನ ಕಟ್ಟಿಸಿದರೆ ಹೇಗೆ" ಎಂದು ಪ್ರಕಾಶ್ ಇದೀಗ ತಮ್ಮ ಮನೆಯ ಆವರಣದಲ್ಲಿ ಪುನೀತ್ ರಾಜ್ಕುಮಾರ್ಗೆ ಚಿಕ್ಕದಾದ ದೇವಸ್ಥಾನ ಕಟ್ಟಿಸಿ ಅಭಿಮಾನವನ್ನು ಮೆರೆದಿದ್ದಾರೆ.
ಅವರ ಜೊತೆ ನಟಿಸಲಾಗದಿದ್ದರೂ, ಕೊನೆಯ ಪಕ್ಷ ಅವರಿಗೆ ಐದು ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ದೇವಸ್ಥಾನ ನಿರ್ಮಿಸಿ ತಮ್ಮ ಆಸೆಯನ್ನು ಪ್ರಕಾಶ್ ಈಡೇರಿಸಿಕೊಂಡಿದ್ದಾರೆ. ಇನ್ನೇನು ಬೆರಳೆಣಿಕೆಯಷ್ಟು ದಿನಗಳಲ್ಲಿ ದೇವಸ್ಥಾನ ಪೂರ್ಣಗೊಳ್ಳಲಿದೆ. ಪುನೀತ್ ಅವರನ್ನು ಹೋಲುವ ಪ್ರತಿಮೆ ಮಾಡಿಸಲಾಗುತ್ತಿದ್ದು, ಪೂರ್ಣವಾಗುತ್ತಿದ್ದಂತೆ ಪ್ರತಿಮೆ ಸ್ಥಾಪಿಸಿ ದೇವಸ್ಥಾನ ಉದ್ಘಾಟನೆ ಮಾಡಬೇಕು ಎಂದು ಪ್ರಕಾಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಕಾಶ್ ಅವರು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಅಲ್ಲದೆ ಅಂದುಕೊಂಡಂತೆ ನಡೆದರೆ ಈ ತಿಂಗಳಲ್ಲಿ ಹಾವೇರಿ ತಾಲೂಕಿನ ಯಲಗಚ್ಚದಲ್ಲಿ ಪುನೀತ್ ರಾಜ್ಕುಮಾರ್ ದೇವಸ್ಥಾನ ಉದ್ಘಾಟನೆಯಾಗಲಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಪ್ರಕಾಶ್, "ಪುನೀತ್ ಜೊತೆ ನಟಿಸದಿದ್ದರೇನಾಯಿತು, ಅವರ ಪ್ರತಿಮೆಗೆ ನಿತ್ಯ ಪೂಜೆ ಸಲ್ಲಿಸುವ ಸೌಭಾಗ್ಯ ದೊರಕಿದೆ. ಅದೇ ಸಾಕು." ಎನ್ನುತ್ತಾರೆ. ಪ್ರಕಾಶ್ ಅವರ ಈ ಕಾರ್ಯಕ್ಕೆ ಯಲಗಚ್ಚ ಸೇರಿದಂತೆ ವಿವಿಧ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಮುಂದೆ ದೇವಸ್ಥಾನ ವಿಸ್ತರಿಸುವ ಆಸೆ ಇರುವ ಪ್ರಕಾಶ್, ಸ್ಥಿತಿವಂತರಾದರೆ ದೊಡ್ಡದಾದ ದೇವಸ್ಥಾನ ಕಟ್ಟಿಸುವ ಇಚ್ಛೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.
Post a comment
Log in to write reviews