ಸರಣಿ ರಜೆ ಮುಗಿಸಿ ಹಿಂದಿರುಗುತ್ತಿರುವ ಪ್ರಯಾಣಿಕರಿಗೆ 21 ಹೆಚ್ಚುವರಿ ಬಸ್ಗಳ ವ್ಯವಸ್ಥೆ
ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬದ ವಿಕೆಂಡ್ ಹಿನ್ನೆಲೆ ರಜೆ ಮುಗಿಸಿ ತಮ್ಮ ತಮ್ಮ ಕೆಲಸಗಳಿಗೆ ಹಿಂತಿರುಗುವ ಪ್ರಯಾಣಿಕರಿಗಾಗಿ ಹುಬ್ಬಳ್ಳಿಯಲ್ಲಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 15 ರಂದು ಗುರುವಾರ ಸ್ವಾತಂತ್ರ್ಯ ದಿನಾಚರಣೆ, 16ರಂದು ವರಮಹಾಲಕ್ಷ್ಮಿ ಹಬ್ಬ, 17 ರಂದು ವಾರಾಂತ್ಯ ಶನಿವಾರ ಹಾಗೂ 18 ರಂದು ಭಾನುವಾರ ಹಿನ್ನೆಲೆಯಲ್ಲಿ ನೌಕರರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿರುವ ಹಲವರು ಸ್ವಂತ ಊರುಗಳಿಗೆ ತೆರಳಿದ್ದರು. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟವಿತ್ತು. ಅದಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ರಜೆ ಮುಗಿಸಿಕೊಂಡು ತಮ್ಮ ಕಾರ್ಯ ಕ್ಷೇತ್ರಗಳಿಗೆ ಹಿಂದಿರುಗುವವರು ಮತ್ತು ಇತರ ಪ್ರಯಾಣಿಕರಿಂದಾಗಿ ಭಾನುವಾರ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣಗಳಿಂದ ಮಧ್ಯಾಹ್ನದಿಂದಲೇ ನೆರೆಯ ಜಿಲ್ಲೆಗಳು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿತ್ತು. ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಸೇರಿದಂತೆ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ ಕಡೆಗೆ ಹೆಚ್ಚಿನ ಜನರು ಪ್ರಯಾಣ ಮಾಡಿರುವುದು ಕಂಡುಬಂದಿದೆ.
ಇನ್ನು ಮುಂಗಡ ಬುಕ್ಕಿಂಗ್ ಸಾರಿಗೆಗಳು ಸೇರಿದಂತೆ ನಿತ್ಯದ ಎಲ್ಲಾ ಬಸ್ಸುಗಳು ಭರ್ತಿಯಾಗಿದ್ದವು. ಹೆಚ್ಚಿನ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮಲ್ಟಿ ಆ್ಯಕ್ಸಲ್ ವೋಲ್ವೋ, ರಾಜಹಂಸ ಹಾಗೂ ವೇಗಧೂತ ಸಾರಿಗೆಗಳು ಸೇರಿದಂತೆ ಒಟ್ಟು 21 ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಅಧಿಕಾರಿಗಳಾದ ಪಿ.ವೈ. ಗಡಾದ, ಸದಾನಂದ ಒಡೆಯರ್, ಐ.ಐ. ಕಡ್ಲಿಮಟ್ಟಿ, ಐ.ಜಿ. ಮಾಗಾಮಿ, ಡಿಪೊ ಮ್ಯಾನೇಜರ್ಗಳಾದ ರೋಹಿಣಿ, ಮುನ್ನಾಸಾಬ್, ನಾಗರಾಜ ಮತ್ತು ಸಿಬ್ಬಂದಿಗಳು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಹಾಜರಿದ್ದು ತಡರಾತ್ರಿಯವರೆಗೆ ವಿಶೇಷ ಬಸ್ಸುಗಳ ಮೇಲ್ವಿಚಾರಣೆ ಮಾಡಿದರು ಎಂದು ನಿಯಂತ್ರಣಾಧಿಕಾರಿ ಮಾಹಿತಿ ನೀಡಿದರು.
Post a comment
Log in to write reviews