ಲೋಕಸಭೆ ಚುನಾವಣೆಗಳಲ್ಲಿ ‘ಗ್ಯಾರಂಟಿ’ ರಾಜಕಾರಣ ಮುಂದುವರಿದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಬಳಿಕ ಆಪ್ ಕೂಡ ಗ್ಯಾರಂಟಿಗಳನ್ನು ಪ್ರಕಟಿಸಿದೆ. ಶುಕ್ರವಾರವಷ್ಟೆ ಜೈಲಿನಿಂದ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ 10 ‘ಕೇಜ್ರಿವಾಲ್ ಕಿ ಗ್ಯಾರಂಟಿ’ಗಳನ್ನು ಘೋಷಿಸಿದ್ದಾರೆ.
ಇಂಡಿಯಾ ಕೂಟವು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದರೆ, ಪ್ರತಿ ಹಳ್ಳಿಯಲ್ಲೂ ಮೊಹಲ್ಲಾ ಕ್ಲಿನಿಕ್, 2 ಕೋಟಿ ಉದ್ಯೋಗ ಸೃಷ್ಟಿ, ಗುಣಮಟ್ಟದ ಸರ್ಕಾರಿ ಶಾಲೆ, ಬಡವರಿಗೆ 200 ಯುನಿಟ್ ಉಚಿತ ವಿದ್ಯುತ್, ಚೀನಾ ವಶದಲ್ಲಿರುವ ಭಾರತದ ಭೂಮಿ ಮರುವಶ, ಅಗ್ನಿವೀರ ಯೋಜನೆ ರದ್ದು- ಸೇರಿದಂತೆ ಸಮರೋಪಾದಿಯಲ್ಲಿ ನಡೆಸಲಾಗುವ 10 ಕೆಲಸಗಳನ್ನು ಪಟ್ಟಿಮಾಡಿದ್ದಾರೆ.
ಕೇಜ್ರಿವಾಲ್ ಘೋಷಿಸಿರುವ ೧೦ ಗ್ಯಾರಂಟಿಗಳು ಇಂತಿವೆ
1. 24 ತಾಸು ವಿದ್ಯುತ್ ಸರಬರಾಜು: ರಾಷ್ಟ್ರವ್ಯಾಪಿ ನಿರಂತರ ವಿದ್ಯುತ್ ಲಭ್ಯತೆ. ರಾಷ್ಟ್ರವ್ಯಾಪಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್
2. ಶಿಕ್ಷಣ ಸುಧಾರಣೆ: ಖಾಸಗಿ ಸಂಸ್ಥೆಗಳನ್ನು ಮೀರಿಸುವಂತೆ ಗುಣಮಟ್ಟದ ಸರ್ಕಾರಿ ಶಾಲೆ ಸ್ಥಾಪನೆ. ದೇಶದಲ್ಲಿ ಜನಿಸಿದ ಪ್ರತಿ ಮಗುವಿಗೆ ಉಚಿತ ಶಿಕ್ಷಣ.
3. ಆರೋಗ್ಯ ಸುಧಾರಣೆ: ಪ್ರತಿ ಗ್ರಾಮ ಮತ್ತು ಪ್ರದೇಶದಲ್ಲಿ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ. ಜಿಲ್ಲಾ ಆಸ್ಪತ್ರೆಗಳು ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಮೇಲ್ದರ್ಜೆಗೆ
4. ರಾಷ್ಟ್ರೀಯ ಭದ್ರತೆ: ಚೀನಾ ಆಕ್ರಮಿಸಿಕೊಂಡಿರುವ ಭೂಮಿ ಮರಳಿ ಪಡೆಯಲು ಕ್ರಮ, ಸೈನ್ಯಕ್ಕೆ ಸಂಪೂರ್ಣ ಸ್ವಾಯತ್ತೆ. ಪ್ರಾದೇಶಿಕ ಸಮಗ್ರತೆಗಾಗಿ ರಾಜತಾಂತ್ರಿಕ ಪ್ರಯತ್ನ ಮುಂದುವರಿಕೆ.
5. ಅಗ್ನಿವೀರ ಯೋಜನೆ ಸ್ಥಗಿತ: ಸೇನೆಗೆ 4 ವರ್ಷ ಮಟ್ಟಿಗೆ ಹಂಗಾಮಿ ಯೋಧರ ನೇಮಿಸುವ ಅಗ್ನಿವೀರ್ ಯೋಜನೆ ಸ್ಥಗಿತ. ಗುತ್ತಿಗೆ ವ್ಯವಸ್ಥೆ ಸ್ಥಗಿತ. ಯೋಧರಿಗೆ ಕಾಯಂ ಹುದ್ದೆ
6. ರೈತ ಕಲ್ಯಾಣ: ಸ್ವಾಮಿನಾಥನ್ ವರದಿ ಆಧಾರದ ಮೇಲೆ ಬೆಳೆಗಳಿಗೆ ನ್ಯಾಯಯುತ ಬೆಲೆ. ರೈತರಿಗೆ ಗೌರವಯುತ ಜೀವನದ ಗ್ಯಾರಂಟಿ.
7. ದೆಹಲಿ ರಾಜ್ಯ ಸ್ಥಾನಮಾನ: ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ. ದಿಲ್ಲಿ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿಕೆ
8. ಉದ್ಯೋಗ ಸೃಷ್ಟಿ: ನಿರುದ್ಯೋಗದ ಸಮಸ್ಯೆ ಪರಿಹರಿಸಲು ಇಂಡಿಯಾ ಕೂಟದಿಂದ ವಾರ್ಷಿಕ 2 ಕೋಟಿ ಹೊಸ ಉದ್ಯೋಗಗಳ ಸೃಷ್ಟಿ
9. ಭ್ರಷ್ಟಾಚಾರ ನಿರ್ಮೂಲನೆ: ಬಿಜೆಪಿಯ ’ರಕ್ಷಣಾತ್ಮಕ ಕ್ರಮಗಳನ್ನು’ ಕಿತ್ತುಹಾಕುವ ಮೂಲಕ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಗೆ ಪಣ. ಪ್ರತಿಯೊಬ್ಬರಿಗೂ ಹೊಣೆಗಾರಿಕೆ. ಬಿಜೆಪಿ ವಾಷಿಂಗ್ ಮಷಿನ್ ಬಯಲು ಮಾಡಲು ಕ್ರಮ.
10. ವ್ಯಾಪಾರ-ಉದ್ಯಮ ಉತ್ತೇಜನ: ಉತ್ಪಾದಕ ವಲಯದಲ್ಲಿ ಚೀನಾ ಮೀರಿಸುವ ಗುರಿ. ಜಿಎಸ್‌ಟಿ ಸರಳೀಕರಣಕ್ಕಾಗಿ ಅದರಲ್ಲಿನ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ನಿಯಮ ರದ್ದು.
Post a comment
Log in to write reviews