ಬೆಂಗಳೂರು: ಯುವಕರು, ಪದವೀಧರರು ಮತ್ತು ಶಿಕ್ಷಕರ ಪರವಾಗಿ ಬಿಜೆಪಿ ಸದಾ ನಿಂತಿದೆ. ಹಲವಾರು ಸುಧಾರಣೆಗಳನ್ನು ತಂದಿದೆ. ಈ ಬಾರಿ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟವನ್ನು ಬೆಂಬಲಿಸಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮನವಿ ಮಾಡಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಪದವೀಧರರ ವಿಚಾರ, ಶಿಕ್ಷಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಹಲವು ಸುಧಾರಣೆ, ಪ್ರಗತಿ, ನೂತನ ಕಾಯ್ದೆ ಕಾನೂನು ಜಾರಿಗೆ ತಂದಿದೆ. ಒಳ್ಳೆಯ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮತ್ತು ಆಡಳಿತ ನೀತಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರ ಕುರಿತು ಕಾಳಜಿ ಗೌರವ ನೀಡದೆ, ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷವು ಶಿಕ್ಷಕರ, ಪದವೀಧರರ ವಿರುದ್ಧವಾಗಿ ನೀತಿಗಳನ್ನು ಹೊಂದಿದೆ ಎಂದು ಆರೋಪಿಸಿದರು.
ಯಡಿಯೂರಪ್ಪನವರ ಅವಧಿಯಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಅವಕಾಶ ಮಾಡಿಕೊಡಲಾಗಿತ್ತು. ಅನುದಾನ ಕೊಡುವ ವಿಚಾರದಲ್ಲೂ ಅವಕಾಶ, ಮಾಡಲಾಗಿದೆ. ಜ್ಞಾನ ಆಯೋಗ ಆರಂಭ, ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ ತರುವ ಮೂಲಕ ದೊಡ್ಡ ಸುಧಾರಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೌಶಲ್ಯಯುಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಕ್ರಮ ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ವಿರೋಧಿಸಿದೆ. ವೈಜ್ಞಾನಿಕವಾಗಿ ಯೋಚಿಸದೆ, ಚರ್ಚೆ- ವಿಮರ್ಶೆ ಇಲ್ಲದೆ ಏಕಾಏಕಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದುಹಾಕುತ್ತೇವೆ ಹಾಗೂ ಹೊಸ ರಾಜ್ಯ ಶಿಕ್ಷಣ ನೀತಿ ತರುವುದಾಗಿ ಹೇಳಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡದ, ಕಾಂಗ್ರೆಸ್ ಸರಕಾರವು ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ.
ಅಷ್ಟೇ ಅಲ್ಲದೆ ಪಬ್ಲಿಕ್ ಎಕ್ಸಾಮ್ ವಿಚಾರದಲ್ಲಿ ಗೊಂದಲ, ಸಮಸ್ಯೆಗಳು ಕಾಡುವಂತಾಗಿದೆ. ಶಿಕ್ಷಣದ ವಾತಾವರಣವನ್ನು ಸಂಪೂರ್ಣ ಹದಗೆಡಿಸಿದ್ದಾರೆ ಎಂದರು. ಈ ವೇಳೆ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗಿಯಾಗಿದ್ದರು.
Post a comment
Log in to write reviews