ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಪ್ರತಿ ಭಟನೆ ತಾರಕಕ್ಕೇರಿದ್ದು, ಏಕಾಏಕಿ ನಡೆದ ಬೆಳವಣಿಗೆಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಸೇನೆ ಖಚಿತಪಡಿಸಿದೆ. ಇದರಿಂದ 15 ವರ್ಷಗಳ 'ಹಸೀನಾ ಆಡಳಿತ ಮುಕ್ತಾಯವಾದಂತಾಗಿದೆ.
ಬಾಂಗ್ಲಾದೇಶದಿಂದ ಸೋಮವಾರ (ಆಗಸ್ಟ್ 05) ಮಧ್ಯಾಹ್ನ ಹಸೀನಾ ಪಲಾ ಯನ ಮಾಡಿದ್ದು , ದೆಹಲಿ ಬಳಿಯ ಹಿಂಡನ್ ವಾಯಪಡೆ ನೆಲೆಗೆ ಬಂದಿಳಿದಿದ್ದಾರೆ. ಅತ್ತ ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು ಎಂದು ದೇಶವನ್ನುದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಹೇಳಿದ್ದಾರೆ. ಮತ್ತೊಮ್ಮೆ ಸೇನೆ ಕೈಗೆ ಆಡಳಿತ ಬಂದಿದ್ದು, ಈ ಬಾರಿ ಇದಕ್ಕಾಗಿ ಕ್ಷಿಪ್ರಕ್ರಾಂತಿ ಮಾಡಬೇಕಾಗಿ ಬರಲಿಲ್ಲ.
ಹಸೀನಾ ಅವರ ನಿವಾಸಕ್ಕೆ ಸಾವಿರಾರು ಪ್ರತಿಭಟನಕಾರರು ಮುತ್ತಿಗೆ ಹಾಕಿದ್ದು, ಅಷ್ಟರಲ್ಲಿ ಅವರು ಅಲ್ಲಿಂದ ಪರಾರಿಯಾಗಿದ್ದಾರೆ. ಕರ್ಮ್ಯೂ ನಿರ್ಲಕ್ಷಿಸಿ ಒಳನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲಿದ್ದ ತರಕಾರಿ, ಹಣ್ಣು, ಮೀನು, ಮಾಂಸ, ಪೀಠೋ ಪಕರಣಗಳನ್ನು ಕೊಂಡೊಯ್ದಿದ್ದಾರೆ. ಬಾಂಗ್ಲಾದೇಶದ ಪಿತಾಮಹ. ಶೇಖ್ ಹಸೀನಾ ಅವರ ತಂದೆ ಶೇಖ್ ಮುಜೀಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.
ರಾಜಧಾನಿ ಢಾಕಾದಲ್ಲಿ 3 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದು, ನ್ಯಾಯಾಲಯ, ಕಚೇರಿ ಮುಚ್ಚಿವೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಕೇವಲ ಪೊಲೀಸರು ಮಾತ್ರವಲ್ಲ, ಪ್ರತಿಭಟನಾಕಾರರು ಕೂಡ ಗನ್ ಹಿಡಿದು ಗುಂಡು ಹಾರಿಸಿದ್ದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ, ಕಳೆದ ಒಂದು ವಾರದಲ್ಲಿ ಸತ್ತವರ ಸಂಖ್ಯೆ 300 ದಾಟಿದೆ. ಭಾರತದ ಗಡಿಯಲ್ಲಿ ಅಲರ್ಟ್ ಘೋಷಿಸಿದ್ದು, ಬಿಎಸ್ಎಫ್ ಮಹಾ ನಿರ್ದೇಶಕರು ಅಲ್ಲಿಗೆ ತೆರಳಿದ್ದಾರೆ. ಭಾರತಕ್ಕೆ ಬಂದಿಳಿದ ಶೇಖ್ ಹಸೀನಾ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿದ್ದಾರೆ. ಈ ಬೆಳವಣಿಗೆಗಳ ಕುರಿತು ವಿದೇಶಾಂಗ ಸಚಿವ ಎಸ್,ಜೈಶಂಕರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಜೈಶಂಕರ್ ಅವರೊಂದಿಗೆ ಚರ್ಚಿಸಿದ್ದಾರೆ. ಹಸೀನಾ ಬ್ರಿಟನ್ ಆಶ್ರಯ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
Post a comment
Log in to write reviews