ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನೀರಿನ ಸಮಸ್ಯೆಯಿಂದಾಗಿ ಜನ ಪರದಾಡುವ ಪರಿಸ್ಥಿತಿ ಈಚೆಗೆ ನಿರ್ಮಾಣವಾಗಿತ್ತು. ಇದೀಗ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ನೀರಿನ ಸಮಸ್ಯೆಯನ್ನು ಮಳೆಗಾಲದಲ್ಲಿ ನೀರು ಸಂಗ್ರಹ ಮಾಡುವ ಮೂಲಕ ತಪ್ಪಿಸಲು ಪಾಲಿಕೆ ಮುಂದಾಗಿದೆ.
ಕಳೆದ ವರ್ಷ ಎದುರಾದ ಬರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನಲ್ಲೂ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಬೆಂಗಳೂರು ಹಲವು ದಶಕಗಳ ನಂತರ ತೀವ್ರ ಪ್ರಮಾಣದಲ್ಲಿ ಗರಿಷ್ಠ ಉಷ್ಣಾಂಶ ಹಾಗೂ ಬರವನ್ನು ಕಂಡಿತ್ತು. ಇದೀಗ ಕಳೆದ ವರ್ಷದ ಹವಾಮಾನ ವೈಪರೀತ್ಯದಿಂದ ಪಾಠ ಕಲಿತಿರುವ ಬಿಬಿಎಂಪಿಯು ನೀರು ಉಳಿತಾಯ ಹಾಗೂ ಉದ್ಯಾನಗಳ ನಿರ್ವಹಣಗೆ ಆದ್ಯತೆ ನೀಡಿದೆ.
ಬೆಂಗಳೂರಿನಲ್ಲಿ ಪಾರ್ಕ್‌ಗಳಲ್ಲಿ ನೀರಿನ ಸಮಸ್ಯೆ ತಪ್ಪಿಸಲು ಹಾಗೂ ವ್ಯರ್ಥವಾಗಿ ನೀರು ಪೋಲಾಗುವುದನ್ನು ತಪ್ಪಿಸಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪಾರ್ಕ್‌ಗಳಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗದೆ ತಡೆಯುತ್ತಿದೆ. ಅಲ್ಲದೇ ಈ ರೀತಿ ಪಾರ್ಕ್‌ಗಳಲ್ಲಿ ಅಲ್ಲೇ ಸಂಗ್ರಹಿಸಿ ಇಂಗಿಸುವ ಮತ್ತು ಅಂರ್ತಜಲ ಮಟ್ಟ ಹೆಚ್ಚಿಸುವ ಸಲುವಾಗಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಬಿಎಂಪಿಯ ಅಡಿಯಲ್ಲಿ 1280 ಪಾರ್ಕ್‌ಗಳಿವೆ. ಈ ಪಾರ್ಕ್‌ಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ. 1280 ಪಾರ್ಕ್‌ಗಳಲ್ಲಿ ಯಾವ ಪಾರ್ಕ್‌ಗಳಲ್ಲಿ ಇಂಗುಗುಂಡಿ (ಗ್ರೌಂಡ್ ವಾಟರ್)ಗೆ ಯೋಗ್ಯವಾಗಿದೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ವಿವಿಧ ಪಾರ್ಕ್‌ಗಳಲ್ಲಿ ಹಂತ-ಹಂತವಾಗಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲು ಪಾಲಿಕೆಯ ತೋಟಗಾರಿಕೆ ಇಲಾಖೆ ಮುಂದಾಗಿದೆ. ಇನ್ನು 2024-25ನೇ ಸಾಲಿನಲ್ಲಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾರ್ಕ್‌ಗಳಲ್ಲಿ 1000 ಇಂಗು ಗುಂಡಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಪಾಲಿಕೆಯ ವತಿಯಿಂದ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಳ್ಳಲಾಗುತ್ತಿದೆ.
Post a comment
Log in to write reviews