ಬೆಂಗಳೂರು: ಮುಡಾ ಹಗರಣದಲ್ಲಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ, ಜೆಡಿಎಸ್ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಬಿಜೆಪಿ-ಜೆಡಿಎಸ್ ಎರಡೂ ಪಕ್ಷ ಒಂದಾಗಿ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿವೆ. ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸಿಎಂ ಮೇಲೆ ವಿರುದ್ಧ ಅನೇಕ ಭ್ರಷ್ಟಾಚಾರ ಹಗರಣ ಆರೋಪಗಳು ಕೇಳಿ ಬಂದಿವೆ. ಸಿಎಂ ವಿರುದ್ಧ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡೋದು ಬಿಟ್ಟು, ಬೆಂಬಲಿಗರು ಹಾಗೂ ಹೈಕಮಾಂಡ್ ಜೊತೆ ಸೇರಿ ಗೂಂಡಾಗಿರಿ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡೋದು ಬಿಟ್ಟು, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಬೆಂಗಳೂರು-ಮೈಸೂರು ಪಾದಯಾತ್ರೆ ವೇಳೆ ಈಗಾಗಲೇ ಮಾತನಾಡಿದ್ದೇವೆ. ತಮ್ಮ ಬೆಂಬಲಕ್ಕೆ ಸಚಿವರು, ಶಾಸಕರು ನಿಲ್ಲುತ್ತಾರೆ ಎನ್ನೋ ಭಂಡತನ ಬಿಡಿ. ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬನ್ನಿ ಎಂದು ಒತ್ತಾಯಿಸಿದರು.
ನೀವು ನ್ಯಾಯಾಲಯದಲ್ಲಿ ಹೋರಾಟ ಮಾಡಿ, ನಾವು ಬೇಡ ಅನ್ನಲ್ಲ. ಕಾನೂನಾತ್ಮಕವಾಗಿ ಏನೇ ಹೋರಾಟ ಮಾಡಿ, ಆದರೆ, ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿಮ್ಮ ಮುಖವಾಡ ಕಳಚಿದೆ, ರಾಜ್ಯದ ಜನ ನೋಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತೊಲಗಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ, ತಿಪ್ಪೇಸ್ವಾಮಿ, ಎಂಎಲ್‌ಎ ನಾಡಗೌಡ, ಸಂಸದರಾದ ಪಿ.ಸಿ ಮೋಹನ್, ಲೆಹರ್ ಸಿಂಗ್, ಎಂಟಿಬಿ ನಾಗರಾಜ್, ಅಶ್ವತ್ಥ್ ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.
Post a comment
Log in to write reviews