ಕೆ ಆರ್ ನಗರದಲ್ಲಿ ನಡೆದ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಜಾಮೀನು ಅರ್ಜಿ ಅಂತಿಮಗೊಂಡಿದ್ದು, ಆದೇಶ ಕಾಯ್ದಿರಿಸಲಾಗಿದೆ.
ವಿಶೇಷ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಭವಾನಿ ಅವರ ಪರ ಹಿರಿಯ ವಕೀಲ ಸಂದೇಶ ಚೌಟ ವಾದ ಮಂಡಿಸಿದ್ದರು. ತಮ್ಮ ಕಕ್ಷಿದಾರರ ಮೇಲೆ ರಾಜಕೀಯ ಪ್ರೇರಿತ ಪ್ರಕರಣ ಇದಾಗಿದ್ದು, ಅಪಹರಣ ಪ್ರಕರಣದ ತನಿಖೆಗೆ ತಮ್ಮ ಕಕ್ಷಿದಾರ ಭವಾನಿ ಸಹಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಈ ಹಿಂದೆ ಬೇರೆ ಬೇರೆ ನ್ಯಾಯಾಲಯದಲ್ಲಿ ನಡೆದ ಪ್ರಕರಣದಲ್ಲಿ ಸುಶೀಲ ಅಗರ್ವಾಲ್ ಮತ್ತು ಮೈತ್ರಿಯ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು ನ್ಯಾಯಾಲಯ ನೀಡಿತ್ತು. CRPC438 ಸೆಕ್ಷನ್ ಇಲ್ಲಿ ಅನ್ವಹಿಸುತ್ತದೆ.ಈ ಪ್ರಕರಣದಲ್ಲಿ ಭವಾನಿ ಅವರ ಪಾತ್ರವಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇದೆ. ಇದೆಲ್ಲಕ್ಕಿಂತ ಭವಾನಿ ಅವರ ಹೆಸರು ಎಫ್ ಐ ಆರ್ ನಲ್ಲಿ ನಮೂದಿಸಿಲ್ಲ. ಅವರ ಪಾತ್ರ ಇಲ್ಲಿ ನೇರವಾಗಿ ಇಲ್ಲದ ಕಾರಣ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ SSP ಜಗದೀಶ್ ಸವಿವರವಾದ ವಾದ ಮಂಡಿಸಿ ಭವಾನಿ ಅವರಿಗೆ ಜಾಮೀನು ನೀಡಿದರೆ, ಸಾಕ್ಷ್ಯನಾಶ ಮಾಡಬಹುದು. ಪ್ರಕರಣಕ್ಕೆ ಸಂಬಂಧ ಸಿಕ್ಕ ಸಾಕ್ಷ್ಯಾಧಾರಗಳನ್ನು ಈಗಲೇ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಾಕ್ಷ್ಯವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಲಾಗಿದೆ. ಭವಾನಿ ರೇವಣ್ಣ ಸಂತ್ರಸ್ಥೆಗೆ ಬೆದರಿಕೆ ಹಾಕಿದ ಆಡಿಯೋ ರೆಕಾರ್ಡ್ ನ ಲಿಖಿತ ಸಂಭಾಷಣೆಯನ್ನ ಎಸ್ಎಸ್ಪಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮಗನ ರಕ್ಷಣೆಗೆ ಭವಾನಿ ಒಳಸಂಚು ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯದ ಮುಂದೆ ವಿಶೇಷ ಅಭಿಯೋಜಕರು ಮನವರಿಕೆ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮೇ 31 ನೇ ತಾರಿಖೀನಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ಅಲ್ಲದೆ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಹಾಜಾರಾಗುವ ದಿನವೇ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿಯ ಭವಿಷ್ಯ ನಿರ್ಣಯವಾಗಲಿದೆ.
Post a comment
Log in to write reviews