ಮೈಸೂರು: ನೀಟ್ ಪರೀಕ್ಷೆಯ ನಡೆದ ಅಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಭ್ಯಾಸ ಮಾಡಿ ಬರೆದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ ಈ ಬಗ್ಗೆ ತನಿಖೆಯಾಗಬೇಕು ಹಾಗೂ ಮರುಪರೀಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಕೆಟ್ಟ ಅಭ್ಯಾಸ, ಎನ್‌ಟಿಎ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದ್ವೇಷದ ರಾಜಕಾರಣ ಬಿಜೆಪಿ ಕೆಲಸ:
ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿ ಮಾಡಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ಮೇಲೆ, ಡಿಕೆ.ಶಿವಕುಮಾರ್, ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿರೋದನ್ನು ಏನೆಂದು ಕರೆಯಬೇಕು. ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನೇ ರದ್ದುಗೊಳಿಸಿದ್ದನ್ನು ಏನೆಂದು ಹೇಳುವುದು ಎಂದು ಪ್ರಶ್ನಿಸಿದರು. ದ್ವೇಷದ ರಾಜಕಾರಣವನ್ನು ನಾನು ಇಂದಿನವರೆಗೆ ಯಾರ ಮೇಲೂ ಮಾಡಿಲ್ಲ. ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ದ್ವೇಷದ ರಾಜಕಾರಣವನ್ನು ನಾನು ಇವತ್ತಿನವರೆಗೂ ಮಾಡಿಲ್ಲ. ಅದೇನಿದ್ರೂ ಬಿಜೆಪಿಯವರ ಕೆಲಸ ಎಂದು ಕಿಡಿಕಾರಿದರು.
ಜನ ಬಿಜೆಪಿಯನ್ನು ಬೆಂಬಲಿಸಲ್ಲ
ದಕ್ಷಿಣ ಭಾರತದ ಏಳು ಜನ ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಕ್ಷಿಣ ಭಾರತದಲ್ಲಿ ಏನೇ ಮಾಡಿದರು ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಆರ್.ಎಸ್.ಎಸ್‌ನ ರಾಜಕೀಯ ಮುಖವಾಡ ಅದು. ಹೀಗಾಗಿ ಉತ್ತರ ಭಾರತದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಆರ್.ಎಸ್.ಎಸ್ ನ ಮುಖ್ಯಸ್ಥರ ಅಹಂಕಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯದ್ದು ದ್ವೇಷದ ರಾಜಕಾರಣ. ಹೆದರಿಸುವುದು ಬೆದರಿಸುವುದು, ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಜನ ಈ ಬಾರಿ ಅವರಿಗೆ ಬಹುಮತ ಕೊಡಲಿಲ್ಲ ಎಂದು ಹೇಳಿದ್ದಾರೆ.
Post a comment
Log in to write reviews