ಕಲಬುರಗಿ : ಅತ್ತಿಗೆಯಿಂದ ದೂರ ಇರು ಎಂದು ಹೇಳಿದಕ್ಕೆ ಮೈದುನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ. ಹೀರಾಲಾಲ್ ಲದಾಫ್ ಕೊಲೆಯಾದ ದುರ್ದೈವಿ.
ಕೊಲೆಯಾದ ಹೀರಾಲಾಲ್ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರವನ್ನು ಹೀರಾಲಾಲ್ ತನ್ನ ಅಣ್ಣ ಬಾಬು ಲದಾಫ್ ಗೆ ತಿಳಿಸಿದ್ದನು. ಇತ್ತ ಅನೈತಿಕ ಸಂಬಂಧ ತಿಳಿದ ಕೂಡಲೇ ರವಿಯಿಂದ ದೂರ ಇರುವಂತೆ ಬಾಬು ತನ್ನ ಪತ್ನಿಗೆ ಹೇಳಿದ್ದರು. ಆದರೆ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಬಾಬು ಲದಾಫ್ ಮೇಲೆಯೇ ಹಲ್ಲೆ ಮಾಡಿದ್ದಾಳೆ.
ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೇ ಬಿಟ್ಟಿದ್ದರು. ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿ ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹಿರಾಲಾಲ್ ಹೇಳಿದ್ದರು. ಇದೇ ವಿಚಾರವಾಗಿ ಹೀರಾಲಾಲ್ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು.
ಮೊನ್ನೆ ರವಿ ಕುಡಿದ ನಶೆಯಲ್ಲಿ ಗಲಾಟೆ ಮಾಡಿ ಹೀರಾಲಾಲ್ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡ್ಡಿದು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಹೀರಾಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment
Log in to write reviews