ಬೆಂಗಳೂರು : ಕೇಂದ್ರ ಸರ್ಕಾರದ ಮೂರು ಪ್ರಮುಖ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರದ ತೀರ್ಮಾನ ವಿರೋಧಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅಂತೆಯೇ ಇಂದು ವಿಧಾನಸಭೆಯಲ್ಲಿ ಮೂರು ನಿರ್ಣಯಗಳನ್ನು ಮಂಡಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
1) ನೀಟ್ ಪರೀಕ್ಷೆಗೆ ವಿರೋಧ : ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಆಗ್ರಹ ಕೇಳಿಬರುತ್ತಿದೆ. ಅದರಲ್ಲೂ, ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬಳಿಕ ಆಗ್ರಹ ಹೆಚ್ಚಾಗಿದೆ. ಇದರ ಬೆನ್ನಲ್ಲೇ, ಕರ್ನಾಟಕದಲ್ಲೂ ನೀಟ್ ಪರೀಕ್ಷೆ ಸೇರಿ ಕೇಂದ್ರ ಸರ್ಕಾರದ ಮೂರು ತೀರ್ಮಾನಗಳನ್ನು ವಿರೋಧಿಸುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
2)ಕ್ಷೇತ್ರ ವಿಂಗಡಣೆ ಬೇಡ : ರಾಜ್ಯವಾರು ವಿಧಾನಸಭೆ ಕ್ಷೇತ್ರಗಳ ಸಮೀಕ್ಷೆ ನಡೆಸಿದ ಬಳಿಕ 2026ರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯನ್ನು ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೂಡ ವಿರೋಧಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
3)ಒನ್ ನೇಷನ್ ಒನ್ ಎಲೆಕ್ಷನ್ ಬೇಡ : ಪ್ರಾದೇಶಿಕವಾರು ಜನರ ಸಮಸ್ಯೆಗಳು, ಆಕಾಂಕ್ಷೆಗಳಿಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆಯಬೇಕು. ಅದೇ ಈವರೆಗೂ ಇರುವ ವಾಡಿಕೆ. ಇದು ವೈವಿಧ್ಯಮಯ ದೇಶವಾದ ಭಾರತಕ್ಕೆ ಸರಿಹೊಂದುತ್ತದೆ. ಆದರೆ ಪ್ರಜಾ ಪ್ರಭುತ್ವದ ವಿಕೇಂದ್ರೀಕರಣದ ವಿರುದ್ಧ ಕೇಂದ್ರವು ಏಕಕಾಲಕ್ಕೆ ಚುನಾವಣೆ ನಡೆಸಲು ಹೊರಟಿರುವುದು ದೇಶಕ್ಕೆ ಮಾರಕ. ಹೀಗಾಗಿ ಒನ್ ನೇಷನ್ ಒನ್ ಎಲೆಕ್ಷನ್ ವಿರೋಧಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Post a comment
Log in to write reviews