ಸಿದ್ದು ನೇತೃತ್ವದ ಸಂಪುಟ ಸಭೆ : 7ನೇ ವೇತನ ಆಯೋಗದ ಬಗ್ಗೆ ಸದ್ಯಕ್ಕಿಲ್ಲ ತೀರ್ಮಾನ ; ದರ್ಶನ್ ಕೇಸ್ನಲ್ಲಿ ಇಂಟರ್ಫಿಯರ್ ಬೇಡ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೆಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, 7ನೆಯ ವೇತನ ಆಯೋಗ ನೀಡಿರುವ ಶಿಫಾರಸುಗಳ ಜಾರಿ ಕುರಿತು ಗಂಭೀರ ಚರ್ಚೆ ನಡೆದಿದ್ದು, ಸದ್ಯಕ್ಕೆ ಯಾವುದೇ ನಿರ್ಣಯ ಹೊರಬೀಳಲಿಲ್ಲ ಎನ್ನಲಾಗಿದೆ.
ಇನ್ನು, ತುರ್ತು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದ 147 ಟೆಂಡರ್ ಪೈಕಿ 53ಕ್ಕೆ ಇನ್ನೂ ಟೆಂಡರ್ ಕರೆಯದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭೀರವಾಗಿ ಪರಿಗಣಿಸಿ, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ.
ಸಂಪುಟ ಸಭೆಯ ಮುಖ್ಯಾಂಶಗಳು :
• ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 112 ವೇಗದೂತ ಬಸ್ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
• ರೈತರಿಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡುವ ಕುರಿತು ಚರ್ಚೆ ನಡೆದಿದೆ.
• ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಯಾರು ಇಂಟರ್ಫಿಯರ್ ಆಗಬಾರದು ಎಂದು ಸಿಎಂ ಎಚ್ಚರಿಕೆ ನೀಡಿದ್ದು, ಕೇಸ್ನಲ್ಲಿ ಯಾವುದೇ ಸಚಿವರು ಅಥವಾ ಶಾಸಕರು ನಿಮ್ಮ ಹೆಸರು ಬರದಂತೆ ಎಚ್ಚರ ವಹಿಸಿ, ಅಂತರ ಕಾಯ್ದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
• ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ 2025 ಫೆಬ್ರವರಿ 12 ರಿಂದ 14ರವರೆಗೆ “Invest Karnataka -2025” ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ರಾಜ್ಯ ಸಚಿವ ಸಂಪುಟ ಸಭೆಯು ಸಮ್ಮತಿಸಿದೆ. ಈಗಾಗಲೇ 75 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ 15 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿದೆ.
• ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋಟಿ ರೂ.ಗಳ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಮಂಜೂರಾತಿ ನೀಡಿದೆ.
• 7ನೆಯ ವೇತನ ಆಯೋಗ ನೀಡಿರುವ ಶಿಫಾರಸುಗಳ ಜಾರಿ ಕುರಿತು ಗಂಭೀರ ಚರ್ಚೆ ನಡೆದಿದ್ದು, ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
Post a comment
Log in to write reviews