ವಿಜಯವಾಡ: ಆಂಧ್ರ ಪ್ರದೇಶ ಸಿಎಂ ಆಗಿ ಎನ್ ಚಂದ್ರಬಾಬು ನಾಯ್ಡು ಅವರು ಹಾಗೂ ಡಿಸಿಎಂ ಆಗಿ ಜನಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗನ್ನವರಂ ಏರ್‌ಪೋರ್ಟ್ ಬಳಿ ಇರುವ ಕೆಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯಪಾಲರಾದ ಅಬ್ದುಲ್ ನಜೀರ್ ಅವರು ಸಿಎಂ, ಡಿಸಿಎಂ ಹಾಗೂ 24 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಬುಧವಾರ ಮುಂಜಾನೆ ಪ್ರಮಾಣ ವಚನ ಸ್ವೀಕರಿಸಲಿರುವ 24 ಸಚಿವರ ಪಟ್ಟಿ ಪ್ರಕಟಿಸಲಾಗಿತ್ತು. ಈ 24 ಸಚಿವರಲ್ಲಿ ಜನಸೇನಾದ ಮೂವರು ಹಾಗೂ ಬಿಜೆಪಿಯ ಒಬ್ಬರು ಸೇರಿದ್ದಾರೆ. ಉಳಿದ ಎಲ್ಲರೂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಚಂದ್ರಬಾಬು ಅವರ ಪುತ್ರ, ಟಿಡಿಪಿ ಜನರಲ್ ಸೆಕ್ರೆಟರಿ ನಾರಾ ಲೋಕೇಶ್, ಟಿಡಿಪಿ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕೆ.ಅಚ್ಚಂನಾಯ್ಡು ಹಾಗೂ ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಚೇರ್‌ಮ್ಯಾನ್ ನಂದೆಂಡ್ಲಾ ಮನೋಹರ್ ಸೇರಿದಂತೆ ಒಟ್ಟು 24 ಜನ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಷಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಪತ್ನಿ, ತೆಲುಗು ನಟ ನಂದಮುರಿ ಬಾಲಕೃಷ್ಣ, ನಟ ಚಿರಂಜೀವಿ, ನಿತಿನ್ ಗಡ್ಕರಿ, ತೆಲಂಗಾಣ ಮಾಜಿ ಗವರ್ನರ್ ತಮಿಳ್ ಸೆಲ್ವಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಮೋದಿ ಕಾಲಿಗೆ ಬಿದ್ದ ನಾಯ್ಡ
ಆಂಧ್ರ ಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಟಿಡಿಪಿ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲು ಆಗಮಿಸಿದ್ದರು. ಈ ವೇಳೆ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗೆ ಬೀಳಲು ಮುಂದಾದರು. ಆದರೆ ಬಿಡದ ಪ್ರಧಾನಿ ಮೋದಿ ಚಂದ್ರಬಾಬು ಅವರನ್ನು ತಬ್ಬಿಕೊಂಡು ಆಂಧ್ರ ಸಿಎಂ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದರು.
Post a comment
Log in to write reviews