ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ನನ್ನು ಭೇಟಿಯಾಗಿರುವ ನಟ ಚಿಕ್ಕಣ್ಣಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿರುವುದರಿಂದಾಗಿ ಚಿಕ್ಕಣ್ಣಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಗೂ ಮುನ್ನ ಜೂ.8ರಂದು ದರ್ಶನ್ ಮತ್ತು ಪ್ರಕರಣದ ಇತರ ಆರೋಪಿಗಳು ಸ್ಟೋನಿ ಬ್ರೂಕ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು ಇದರಲ್ಲಿ ಚಿಕ್ಕಣ್ಣ ಸಹ ಪಾರ್ಟಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲೆಂದೇ ಪೊಲೀಸರು ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದರು. ಚಿಕ್ಕಣ್ಣ ಮುಂದೇನಾದರೂ ಹೇಳಿಕೆ ಬದಲಿಸಿದರೆ ವಿಚಾರಣೆಗೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ನ್ಯಾಯಾಧೀಶರ ಮುಂದೆ ಹೇಳಿಕೆ ಪಡೆದುಕೊಳ್ಳಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಚಿಕ್ಕಣ್ಣ ಕೇಂದ್ರ ಕಾರಾಗೃಹಕ್ಕೆ ಹೋಗಿ ದರ್ಶನ್‌ರನ್ನು ಭೇಟಿಯಾಗಿದ್ದರು. ಸಾಮಾನ್ಯವಾಗಿ ಪ್ರಕರಣ ತನಿಖಾ ಹಂತದಲ್ಲಿರುವಾಗ ಸಾಕ್ಷಿಯಾದ ವ್ಯಕ್ತಿ ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಹೀಗಾಗಿ, ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀಡಿ ವಿಚಾರಣೆ ಮಾಡಲಿದ್ದಾರೆ.
ಯಾವ ಉದ್ದೇಶಕ್ಕೆ ಭೇಟಿಯಾಗಿದ್ದೀರಿ? ಏನು ಮಾತನಾಡಿದ್ದೀರಿ? ಎಂದು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಇದರ ಜತೆಯಲ್ಲಿ ಸಾಕ್ಷಿ ಹಾಗೂ ಆರೋಪಿ ಭೇಟಿಯ ಕುರಿತು ಜೈಲಾಧಿಕಾರಿಗಳ ಬಳಿಯೂ ಪೊಲೀಸರು ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ, ಪ್ರಕರಣದ ಸಾಕ್ಷಿದಾರರು ದರ್ಶನ್‌ನನ್ನು ಭೇಟಿ ಮಾಡುವುದನ್ನು ತಡೆಯಲು ನ್ಯಾಯಾಲಯದಲ್ಲಿ ಎಸ್ಐಟಿ ಮನವಿ ಮಾಡಲಿದೆ.
ದರ್ಶನ್ ಭೇಟಿಯಾದವರಿಗೆ ಢವಢವ: ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಸಾಕಷ್ಟು ಮಂದಿ ದರ್ಶನ್‌ರನ್ನು ಭೇಟಿಯಾಗಿದ್ದು, ಅವರೆಲ್ಲರಿಗೂ ವಿಚಾರಣೆಯ ಢವಢವ ಶುರುವಾಗಿದೆ. ಆ ವ್ಯಕ್ತಿಗಳ ಮಾಹಿತಿ ಕಲೆ ಹಾಕಿರುವ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆ ಮಾಡಲು ತೀರ್ಮಾನಿಸಿದ್ದಾರೆ.
ನ್ಯಾಯಾಲಯಕ್ಕೆ ಶೀಘ್ರ ಚಾರ್ಜ್‌ಶೀಟ್: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಅಂತಿಮಘಟ್ಟ ತಲುಪಿದ್ದು, 90 ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ಪೊಲೀಸರ ಕೈ ಸೇರಿವೆ. ಇದಕ್ಕೆ ಪೂರಕವಾಗಿ ಕೆಲ ಮಾಹಿತಿಗಳನ್ನು ಮತ್ತೆ ಕೇಳಲಾಗಿದೆ. ಹೈದರಾಬಾದ್ ಎಫ್ಎಸ್ಎಲ್‌ಗೆ ಕಳುಹಿಸಲಾಗಿದ್ದ ಎಲೆಕ್ಟ್ರಾನಿಕ್ ಡಿವೈಸ್ಗಳ ಪರಿಶೀಲನೆ ಮುಗಿದಿರುವ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆ ವರದಿಯೂ ಕೈ ಸೇರಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ತಿಳಿಸಿದರು.
ವಿಚಾರಣೆ ಮುಂದೂಡಿಕೆ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 16ನೇ ಆರೋಪಿ ಕೇಶವಮೂರ್ತಿ, ಜಾಮೀನು ಕೋರಿ ಶುಕ್ರವಾರ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಆ.27ಕ್ಕೆ ಮುಂದೂಡಿತು. ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿ, ಅರ್ಜಿ ಮುಂದೂಡಿದರು.
Post a comment
Log in to write reviews