ಪುತ್ರನ ಚುನಾವಣಾ ಟಿಕೆಟ್ ಭದ್ರ ಪಡಿಸುವುದು ಸೇರಿದಂತೆ ವಿಧಾನ ಪರಿಷತ್ ಚುನಾವಣೆ ಕಾರ್ಯತಂತ್ರ ರೂಪಿಸಲು ಸಿಎಂ ಮಂಗಳವಾರ ತೆರಳಲಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಂಬಂಧಿಸಿಂತೆ ಹೈಕಮಾಂಡ್ ಜೊತೆ ಚರ್ಚಿಸಲು ಶಿವಕುಮಾರ್ ಅವರು ಕೂಡ ದೆಹಲಿಯತ್ತ ಮುಖ ಮಾಡಿದ್ದಾರೆ.
ವಿಧಾನಸಭಾ ಪರಿಷತ್ ಚುನಾವಣೆ ಹಿನ್ನೆಲೆ ಮಂಗಳವಾರ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿದ್ದಾರೆ . 11 ಪರಿಷತ್ ಸ್ಥಾನಗಳ ಪೈಕಿ, 7 ಸ್ಥಾನಗಳಿಗೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಅಳೆದು ತೂಗಿ ಹಾಕಿ ಹಲವರ ಹೆಸರನ್ನು ಅಂತಿಗೊಳಿಸಿರುವ ಕೆಪಿಸಿಸಿ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ಯಲ್ಲಿದ್ದಾರೆ ಎನ್ನಲಾಗಿದೆ.
ಹೀಗಿದ್ದರೂ ಸಿಎಂ ತಮ್ಮ ಪುತ್ರನಿಗಾಗಿ ಹಾಗೂ ಡಿಸಿಎಂ ಅವರು ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವನ್ನು ಹೈಕಮಾಂಡ್ ನೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಪರಿಷತ್ ಚುನಾವಣೆ ಸಂಬಂಧ ಕೆಪಿಸಿಸಿ ಅಂತಿಮ ಪಟ್ಟಿಯಲ್ಲಿ, ಮೈಸೂರು ಜಿಲ್ಲೆಗೆ ಎರಡು ಸ್ಥಾನ ಸಿಗುವ ನಿರೀಕ್ಷೆಯಿದ್ದು, ಸಿಎಂ ಪುತ್ರ ಯತೀಂದ್ರ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿಜಿ ವಿಜಯ್ ಕುಮಾರ್ ಹೆಸರು ಪಟ್ಟಿಯಲ್ಲಿದೆ. ಹೀಗಿದ್ದರೂ ಹೊಸ ಹೆಸರುಗಳು ಸೇರ್ಪಡೆಗೊಂಡರೆ ಅಚ್ಚರಿ ಏನಿಲ್ಲ.
ಸಿದ್ದರಾಮಯ್ಯ ಅವರಿಗಾಗಿ ವರುಣ ಕ್ಷೇತ್ರ ತ್ಯಾಗ ಮಾಡಿದ್ದ ಯತೀಂದ್ರ ಅವರಿಗೆ ಪರಿಷತ್ ಟಿಕೆಟ್ ಸಿಗಲಿದೆ ಎನ್ನಲಾಗಿದೆ. ಅಲ್ಲದೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಲಕ್ಷ್ಮಣ್ ಗೆ ಬಿಟ್ಟು ಕೊಟ್ಟಿದ್ದ ವಿಜಯ್ ಕುಮಾರ್ ಸೇರಿದಂತೆ ಏಳು ಸ್ಥಾನಕ್ಕೆ ಪಟ್ಟಿ ಅಂತಿಮಗೊಳಲಾಗಿದೆ. ಈ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ
ಪ್ರಸ್ತುತ ಡಿಸಿಎಂ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಕಳೆದ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದಿದೆ. ಈಗ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸಬೇಕಿದೆ. ಈ ಹಂತದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಈ ಹಿಂದೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಈ ಬಾರಿ ಅಧ್ಯಕ್ಷರಾಗಲು ಹಲವರು ಮುಂದೆ ಬಂದಿದ್ದರೂ ಹಿರಿಯ ಮುಖಂಡರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಆಸಕಿ ವಹಿಸಿಲ್ಲ ಎನ್ನಲಾಗಿದೆ. ಇದೇ ವೇಳೆ ಸಹಕಾರಿ ಸಚಿವರಾಗಿರುವ ರಾಜಣ್ಣ ಅವರು ನಾನು ಅಧ್ಯಕ್ಷ ಹುದ್ದೆಗೆ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಈ ಎಲ್ಲ ಲೆಕ್ಕಾಚಾರಗಳ ನಡುವೆಯೇ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರ ಹೆಸರು ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಕೇಳಿಬರುತ್ತಿದೆ. ಹಲವು ಲೆಕ್ಕಾಚಾರಗಳ ನಡುವೆ ಸಿಎಂ ಹಾಗೂ ಡಿಸಿಎಂ ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿದೆ.
Post a comment
Log in to write reviews