ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ಸಭೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲು ವ್ಯಕ್ತಿಗೆ 170 ರೂ.ನಂತೆ ಹಣ ವರ್ಗಾವಣೆ ಮಾಡುವುದನ್ನು ಮುಂದುವರಿಸುವುದೂ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಸಚಿವ ಸಂಪುಟ ಕೈಗೊಂಡಿದೆ. ಕೆಲವು ಸಚಿವರು ಅಧಿಕಾರಿಗಳನ್ನು ‘ಸರ್, ಸರ್’ ಎಂದು ಸಂಬೋಧಿಸಿ ಮಾತನಾಡುತ್ತಿದ್ದು. ಇದನ್ನು ಕಂಡ ಸಿಎಂ ಸಿದ್ದರಾಮಯ್ಯ ಸಿಟ್ಟಾದರು. ಅಷ್ಟೇ ಅಲ್ಲ, ಕೆಲವು ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು.
ಯಾವೊಬ್ಬ ಸಚಿವರೂ ಅಧಿಕಾರಿಗಳನ್ನು ‘ಸರ್’ ಎಂದು ಕರೆಯಕೂಡದು ಎಂದು ಅಧಿಕಾರಿಗಳೆದುರಿಗೇ ನೇರವಾಗಿ ಸಿಎಂ ಹೇಳಿದರು. ಸಾಂವಿಧಾನಿಕವಾಗಿ ನೀವು (ಸಚಿವರು) ಇಲಾಖೆಯ ನಾಯಕರು. ಅಧಿಕಾರಿ ವರ್ಗ ನಿಮ್ಮ ಕೈಯಡಿ ಇದೆ. ನೀವೇ ಅಧಿಕಾರಿಗಳಿಗೆ ‘ಸರ್, ಸರ್’ ಎನ್ನುವ ಮೂಲಕ ಮಂತ್ರಿ ಸ್ಥಾನವನ್ನು ಕಡೆಗೆಣಿಸುತ್ತಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಲಾಖೆ ಬಗ್ಗೆ ಮಾಹಿತಿ ಕೊರತೆ ಇದ್ದರೆ ಅದಕ್ಕೆ ಬೇಕಾದ ಸೂಕ್ತ ಮಾಹಿತಿ ಅಧಿಕಾರಿಗಳಿಂದ ತರಿಸಿಕೊಳ್ಳಿ. ಅದರ ಬದಲಾಗಿ ಅದೇ ಇಲಾಖೆಯ ಇನ್ನೋರ್ವ ಅಧಿಕಾರಿಗೆ ‘ಸರ್ ಸರ್’ ಎಂದರೆ ಹೇಗೆ? ಅಧಿಕಾರಿಗಳು ಸದಾ ಆ ಸ್ಥಾನಕ್ಕೆ ಗೌರವಿಸುವಂತೆ ನಿಮ್ಮ ವರ್ತನೆ ಸಹ ಇರಬೇಕು ಎಂದು ಸಿಎಂ ನಿರ್ದೇಶನ ನೀಡಿದರು.
ಕಡತವೊಂದರ ಮಾಹಿತಿ ನೀಡುವ ಸಂದರ್ಭದಲ್ಲಿ ಸಚಿವರೊಬ್ಬರು ಅಧಿಕಾರಿಗಳ ಹೆಸರಿನ ಜತೆ ‘ಸರ್’ ಸೇರಿಸಿ ಮಾತನಾಡಿದ್ದು ಇಷ್ಟಕ್ಕೆಲ್ಲ ಕಾರಣವಾಯಿತು.
Post a comment
Log in to write reviews