ಹೇಳದೇ ಕೇಳದೇ ಸಾಮೂಹಿಕ ಸಿಖ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದ್ದು, ಅಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ.
ನಿನ್ನೆ ಏರ್ ಇಂಡಿಯಾದ 300ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆ ಹಾಕಿ ಫೋನ್ ಸ್ವಿಚ್ಆಫ್ ಮಾಡಿ ಕುಳಿತಿದ್ದರು. ಇದರಿಂದ 70ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ದೇಶಿಯ ವಿಮಾನಗಳ ಪ್ರಯಾಣ ರದ್ದಾಗಿದ್ದು, ಮತ್ತೆ ಕೆಲವು ವಿಮಾನಗಳ ಪ್ರಯಾಣ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು.
ಇದರಿಂದ ಏರ್‌ಲೈನ್ಸ್ ದೊಡ್ಡಮಟ್ಟದಲ್ಲಿ ಮುಜುಗರಕ್ಕೊಳಗಾಗಿತ್ತು. ಹೀಗಾಗಿ ನಿನ್ನೆ ಸಂಜೆ 4 ಗಂಟೆಯೊಳಗೆ ಕೆಲಸದ ಸ್ಥಳಕ್ಕೆ ಹಾಜರಾಗುವಂತೆ ಏರ್‌ಲೈನ್ಸ್ ಸೂಚನೆ ನೀಡಿತ್ತು. ಆದರೆ ಈ ಸೂಚನೆಗೂ ತಲೆಕೆಡಿಸಿಕೊಳ್ಳದ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಏರ್ ಇಂಡಿಯಾ ಸಂಸ್ಥೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗ ಏರ್ ಇಂಡಿಯಾ ಬೇಜವಾಬ್ದಾರಿ ತೋರಿದ ತನ್ನ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ.
ಏರ್ ಇಂಡಿಯಾ ನೌಕರರ ಈ ಸಾಮೂಹಿಕ ರಜೆಯಿಂದಾಗಿ ಇಂದೂ ಕೂಡ 74 ವಿಮಾನಗಳ ಪ್ರಯಾಣ ಸ್ಥಗಿತಗೊಂಡಿದೆ. ಟಾಟಾ ಮಾಲೀಕತ್ವದಲ್ಲಿರುವ ಏರ್ ಇಂಡಿಯಾದ ಉದ್ಯೋಗಿಗಳು ವೇತನ ಪರಿಷ್ಕರಣೆ, ಹಾಗೂ ಇನ್ಸೆಂಟಿವ್ ಹೊಸ ಉದ್ಯೋಗ ನೀತಿ ಮುಂತಾದ ವಿಚಾರಗಳ ಕಾರಣಕ್ಕೆ ಪ್ರತಿಭಟನೆಯ ರೂಪವಾಗಿ ಈ ಸಾಮೂಹಿಕ ರಜೆ ಹಾಕಿದ್ದಾರೆ ಎಂದು ವರದಿ ಆಗಿದೆ.
Post a comment
Log in to write reviews