ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ಕಾಲೇಜು ಓದುತ್ತಿದ್ದ ಇಬ್ಬರು ಯುವತಿಯರನ್ನು ಭೀಕರವಾಗಿ ಚಾಕು ಇರಿದು ಕೊಲೆ ಮಾಡಿದ ಘಟನೆ ನಡೆದಿದೆ. ಜೊತೆಗೆ ಕೊಡಗು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದ ವಿದ್ಯಾರ್ಥಿನಿಯ ತಲೆಯನ್ನೇ ಕಡಿದು ಕ್ರೂರತ್ವ ಮೆರೆದ ಅಮಾನವೀಯ ಘಟನೆಗಳು ಇನ್ನೂ ನೆನಪಿನ ಪುಟದಿಂದ ಮಾಸದೇ ಉಳಿದಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಯುವತಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಕುತ್ತಿಗೆ ಹಾಗೂ ಕೈಗಳನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾಳೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದ್ದು, ಯುವತಿಯ ತಾಯಿ ಮಾತ್ರ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಯಾರೋ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮೃತ ಯುವತಿ 21 ವರ್ಷದ ಪ್ರಭುಧ್ಯಾ ಖಾಸಗಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಮೇ 15 ಸಂಜೆ ನಡೆದಿರುವ ಘಟನೆ, ತಡವಾಗಿ ಮೇ 16 ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳ ಪರಿಶೀಲನೆ ಮಾಡಿದ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Post a comment
Log in to write reviews