ಟಿಬಿ ಡ್ಯಾಂ ಕ್ರಸ್ಟ್ ಗೇಟ್ ನಿರ್ಮಾಣದಲ್ಲೂ ಕಮಿಷನ್ ರಾಜಕೀಯ! ಕಾಂಗ್ರೆಸ್ ಮುಖಂಡನಿಂದಲೇ ಆರೋಪ
ಗಂಗಾವತಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ನದಿ ಪಾಲಾಗಿ ರೈತರು ಕಂಗಾಲಾಗುತ್ತಿದ್ದರೆ, ಇತ್ತ ಗೇಟ್ ನಿರ್ಮಾಣ ಕಾಮಗಾರಿಯಲ್ಲಿ ಕಮಿಷನ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 22 ಅಡಿ ಅಗಲದ 60ಕ್ಕೂ ಹೆಚ್ಚು ಅಡಿ ಎತ್ತರದ ಬೃಹತ್ ಕಬ್ಬಿಣದ ಗೇಟ್ ನಿರ್ಮಾಣ ಕಾರ್ಯಕ್ಕೆ ನಾಡಿನ ಹೆಸರಾಂತ ಸಂಸ್ಥೆ ಹಾಗೂ ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿಯೇ ಇರುವ ಜಿಂದಾಲ್ ಸಂಸ್ಥೆ ಮುಂದೆ ಬಂದಿತ್ತು. ಆದರೆ ಆ ಸಂಸ್ಥೆ ಕಾಮಗಾರಿಗೆ ಕಮಿಷನ್ ನೀಡದು ಎಂಬ ಕಾರಣಕ್ಕೆ ಗೇಟ್ ನಿರ್ಮಾಣ ಕಾಮಗಾರಿಯಿಂದ ಕೊಕ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಅನುಭವ, ಗುಣಮಟ್ಟದ ಖಾತರಿ ಮತ್ತು ಕಾಮಗಾರಿ ನಿರ್ವಹಿಸಿದ ಯಾವುದೇ ಪ್ರಮಾಣಪತ್ರ ಇಲ್ಲದ ಸ್ಥಳೀಯ ಅಮೀರ್ ಮತ್ತು ನಾರಾಯಣ ಎಂಜಿನಿಯರಿಂಗ್ ಎಂಬ ಎರಡು ಸಂಸ್ಥೆಗಳಿಗೆ ಗೇಟ್ ನಿರ್ಮಾಣದ ಜವಾಬ್ದಾರಿ ವಹಿಸಿರುವುದು ಅನುಮಾನಾಸ್ಪದವಾಗಿದೆ. ಯಾವ ಮಾನದಂಡದ ಮೇಲೆ ಅವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಭವಾನಿಮಠ ಪ್ರಶ್ನಿಸಿದ್ದಾರೆ.
ತುರ್ತು, ವಿಕೋಪದಂತಹ ಸಂದರ್ಭದಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಕರ್ನಾಟಕ ಟೆಂಡರ್ ಪಾರದರ್ಶಕ ನಿಯಮ(ಕೆಟಿಟಿಪಿ)ಗಳ ಪ್ರಕಾರ ಟೆಂಡರ್ ಕರೆಯದೇ ಕಾಮಗಾರಿ ಮಾಡಲು ಅವಕಾಶ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು, ಗೇಟ್ ನಿರ್ಮಾಣ ಕಾಮಗಾರಿಯಲ್ಲೂ ಅಕ್ರಮಕ್ಕೆ ಮುಂದಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಬಗ್ಗೆ ಪೂರ್ವಪರ ಯಾವ ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ನೀಡಿರುವುದು ಏಕೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಜಿಂದಾಲ್‌ನವರು ಯಾವುದೇ ಪರ್ಸಂಟೇಜ್ ನೀಡುವುದಿಲ್ಲ ಎಂಬ ಏಕೈಕ ಕಾರಣಕ್ಕೆ ಆ ಸಂಸ್ಥೆಗೆ ಗೇಟ್ ನಿರ್ಮಾಣ ಕಾಮಗಾರಿಯ ಟೆಂಡರ್ ನಿರಾಕರಿಸಲಾಗಿದೆ ಎಂದು ಮುಕುಂದರಾವ್ ಆರೋಪಿಸಿದ್ದಾರೆ.
Post a comment
Log in to write reviews