ಚಿಕ್ಕಬಳ್ಳಾಪುರ: ಸಂಸದ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ, ಸಂಸದ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಗಜೇಂದ್ರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆ.ನಾಗರಾಜ್ ಚುನಾಯಿತರಾಗಿದ್ದಾರೆ. ಒಟ್ಟು 35 ಮತಗಳಿದ್ದು, ಬಿಜೆಪಿಗೆ 21 ಮತಗಳು ಹಾಗೂ ಕಾಂಗ್ರೆಸ್‌ಗೆ 14 ಮತಗಳು ದೊರೆತಿವೆ.
ಚುನಾವಣೆಯ ಬಳಿಕ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗ, ಆಮಿಷ, ಬೆದರಿಕೆ ಇವೆಲ್ಲದರ ನಡುವೆಯೂ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ಗೆಲುವಿಗೆ ಕಾರಣೀಭೂತರಾದ ಎಲ್ಲ ನಾಯಕರಿಗೂ ನನ್ನ ಅಭಿನಂದನೆ ತಿಳಿಸುತ್ತೇನೆ. ಕಾಂಗ್ರೆಸ್ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಶಾಸಕ ಪ್ರದೀಪ್ ಈಶ್ವರ್ ಅವರ ಉಡಾಫೆ ಮಾತು ಕಮಲದ ಹೂ ಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿದೆ. ಅವರ ನಡೆ, ನುಡಿ ಇದೇ ರೀತಿ ಮುಂದುವರಿಯಲಿ. ಮೂರು ವರ್ಷದ ಬಳಿಕ ಅವರಿಗೆ ಎಲ್ಲೂ ಅವಕಾಶ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮುಖಂಡರು ಕೆಲವು ಸದಸ್ಯರನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದರು. ಆದರೆ ಅಂತಿಮವಾಗಿ ಜನರ ಬಯಸಿದ್ದೇ ಫಲಿತಾಂಶವಾಗಿ ಬಂದಿದೆ. ಚಿಕ್ಕಬಳ್ಳಾಪುರ ಸುರಕ್ಷಿತ ಹಾಗೂ ಸುಸಜ್ಜಿತ ನಗರವಾಗಿ ಮತ್ತು ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಪಾನ ಯೋಜನೆಯಡಿ ₹40 ಕೋಟಿ ಅನುದಾನ ತಂದಿದ್ದರೂ, ಕಾಂಗ್ರೆಸ್ ಸರ್ಕಾರ ಟೆಂಡರ್ ಹಂತದಲ್ಲಿ ರದ್ದು ಮಾಡಿ ರಾಜಕೀಯ ಮಾಡಿದೆ. ಕಾಂಗ್ರೆಸ್ ಶಾಸಕರು ಮತ್ತು ಉಸ್ತುವಾರಿ ಸಚಿವರು ಕಳೆದ 16 ತಿಂಗಳಿಂದ ಚಿಕ್ಕಬಳ್ಳಾಪುರ ನಗರವನ್ನು ಅಭಿವೃದ್ಧಿ ಶೂನ್ಯವಾಗಿಸಿದ್ದಾರೆ ಎಂದು ದೂರಿದರು.
ಈಗಲಾದರೂ ರಾಜಕೀಯ ಬದಿಗಿಟ್ಟು ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಹಕಾರ ನೀಡಿ ನಗರದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.
Post a comment
Log in to write reviews