ಹುಬ್ಬಳ್ಳಿ: ಲೋಕಸಭೆ ಚುನಾವಣೆ ಸೋಲನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ರಾಜಕೀಯ ವೈಷಮ್ಯ ತೋರುತ್ತಿದೆ ಎಂದು ಪ್ರಲ್ಹಾದ ಜೋಶಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತ ಮರೆಮಾಚಲು ಬಿಎಸ್‌ವೈ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಜೋಶಿ ಹರಿಹಾಯ್ದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ಗೆ ಅದನ್ನು ಜೀರ್ಣಿಸಿಕೊಳ್ಳಲು ಆಗಿತ್ತಿಲ್ಲ. ಇದಕ್ಕಾಗಿ ಆಡಳಿತವನ್ನು ಮನಬಂದಂತೆ ದುರುಪಯೋಗ ಮಾಡಿಕೊಳ್ಳುತ್ತಿದೆ. ಮೂರ್ನಾಲ್ಕು ತಿಂಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧ ಪೋಸ್ಕೋ ಪ್ರಕರಣ ದಾಖಲಿಸಿದ ಮಹಿಳೆ ಮಾನಸಿಕ ಅಸ್ವಸ್ಥಳು, ದುರುದ್ದೇಶದಿಂದ ದೂರು ನೀಡಿದ್ದಾಳೆ ಎಂದು ಆಗಲೇ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಆದರೆ ಈಗ ಚುನಾವಣೆ ಮುಗಿದ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಹೊಸ ಡ್ರಾಮಾ ಶುರು ಮಾಡಿದ್ದಾರೆ ಎಂದು ಜೋಶಿ ಖಂಡಿಸಿದ್ದಾರೆ.
ಆ ಮಹಿಳೆ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಗೃಹ ಮಂತ್ರಿಗಳೇ ಖುದ್ದಾಗಿ ಈ ಹಿಂದೆ ಹೇಳಿದ್ದರು. ಈಗ ತಮ್ಮ ದುರಾಡಳಿತವನ್ನು ಮರೆಮಾಚಲು ಬಿಜೆಪಿ ವರಿಷ್ಠ BSY ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಲ್ಲ ಸಲ್ಲದ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಎಳೆಯುತ್ತಿರುವುದು ರಾಜಕೀಯ ವೈಷಮ್ಯ. ಅವರ ಈ ದುರ್ಬುದ್ಧಿಗೆ ತಕ್ಕ ಪಾಠ ಸಿಗುತ್ತೆ ಎಂದು ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
Post a comment
Log in to write reviews