ಬೆಂಗಳೂರು: ಕಾಂಗ್ರೆಸ್ನ ಗ್ಯಾರಂಟಿ ಮತದಾರರಿಗೆ ಇಷ್ಟವಾಗಿಲ್ಲ, ಅಲ್ಲದೆ ಅಭಿವೃದ್ದಿಯಲ್ಲಿ ಸರ್ಕಾರ ಪಾಪರ್ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಗ್ಯಾರಂಟಿ ಜಾರಿ ಮಾಡಿತ್ತು. ಈಗ ಸರ್ಕಾರ ನಡೆಸಲು ದುಡ್ಡಿಲ್ಲದಂತಾಗಿದೆ. ಸರ್ಕಾರದ ಸಿಬ್ಬಂದಿಗಳಿಗೂ ಸಂಬಳ ಕೊಡಲು ಸಾಲ ಮಾಡುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.
ಅವರ ಪಕ್ಷದ ಶಾಸಕರುಗಳೇ ಅನುದಾನ ಯಾವಾಗ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಪಾಪರ್ ಆಗಿರುವ ಸರ್ಕಾರ ಹಲವು ಬಿಲ್‌ಗಳನ್ನ ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಸರ್ಕಾರವಿದ್ದಾಗ ಶಾಸಕರು ಶಾಲೆ, ಆಸ್ಪತ್ರೆ, ನೀರಾವರಿ ಯೋಜನೆಗಳನ್ನ ಕ್ಷೇತ್ರಕ್ಕೆ ತಂದಿದ್ದರು. ಆದ್ರೆ ಈಗ ಕಾಂಗ್ರೆಸ್‌ನ ಶಾಸಕರು ಕ್ಷೇತ್ರಕ್ಕೆ ಶೂನ್ಯ ಅಭಿವೃದ್ಧಿ ಮಾಡಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಕನಕಪುರದಲ್ಲಿ ಹೀನಾಯವಾಗಿ ಸೋತಿದ್ದಾರೆ. ರಾಜ್ಯದಲ್ಲಿ ಸರ್ಕಾರವಿದ್ದು, ಏಕೆ ಸೋತಿದ್ದೀರಿ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ದಲಿತರ 187 ಕೋಟಿ ರೂ. ಲೂಟಿ ಮಾಡಿದ್ದರಿಂದಲೇ ಇವರು ಸೋತಿದ್ದಾರೆ ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿದುಬಂದಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸರ್ಕಾರ ಮೂಲೆ ಸೇರಿದೆ ಎಂದೆಲ್ಲಾ ರಾಜ್ಯ ಸರ್ಕಾರವನ್ನು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ, ಸಾರ್ವಜನಿಕರ ದಿನ ನಿತ್ಯದ ಬಳಕೆಯ ಕಸಕ್ಕೂ ತೆರಿಗೆ ಹಾಕಲು ಮುಂದಾಗಿದ್ದಾರೆ. ಮುಂದೊಂದು ದಿನ ನಿತ್ಯದ ಬಳಕೆಗಳ ಮೇಲೂ ತೆರೆಗಿ ವಿಧಿಸಿದರೂ ಅಚ್ಚರಿ ಇಲ್ಲಾ, ಆದ್ರೆ ಇದೆಲ್ಲವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಪ್ರತಿಭಟಿಸುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಹಿಂದೆ ಕೇವಲ ಬಿ.ನಾಗೇಂದ್ರ ಇಲ್ಲ. ಇದರ ಹಿಂದೆ ದೊಡ್ಡ ನಾಯಕರೇ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೊತ್ತಿದ್ದೇ ಈ ಹಗರಣ ನಡೆದಿದೆ. ಇದರ ಜೊತೆ ಇನ್ನಷ್ಟು ಸಚಿವರೂ ಸೇರಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಕೂಡ ರಾಜೀನಾಮೆ ನೀಡಬೇಕು. ಈ ಅಕ್ರಮದಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿದ್ದು, ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ನರೇಂದ್ರ ಮೋದಿಯವರು ಹಿಂದುಳಿದ ವರ್ಗದ ನಾಯಕರಾಗಿದ್ದು, ಸಚಿವ ಸಂಪುಟದಲ್ಲಿ ಎಲ್ಲ ಜಾತಿ ವರ್ಗಕ್ಕೆ ಸ್ಥಾನಮಾನ ನೀಡಿದ್ದಾರೆ. ಕರ್ನಾಟಕದ ಸಂಸದರಿಗೂ ಅವಕಾಶ ನೀಡಿರುವುದು ಅಭಿನಂದನೀಯ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಬಾಗಿಲಾಗಿದ್ದು, ಇಲ್ಲಿಗೆ ಹೆಚ್ಚು ಅವಕಾಶ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
Post a comment
Log in to write reviews