ಬೆಂಗಳೂರು: ಅನರ್ಹ ಬಿಪಿಎಲ್ ರೇಶನ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕೈಹಾಕಿದೆ. ಈ ಮೂಲಕ ಬಿಪಿಎಲ್‌ಗಾಗಿ ವರ್ಷದಿಂದ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಈಗಾಗಲೇ ಕೇಂದ್ರ ಸರಕಾರ ನಿಗದಿಪಡಿಸಿರುವ ಆದ್ಯತಾ ಪಡಿತರ ಕುಟುಂಬ (ಬಿಪಿಎಲ್)ಗಳು 1.03 ಕೋಟಿ ಹಾಗೂ ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರದ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕುಟುಂಬಗಳಿದ್ದು, ಅವುಗಳಿಗೆ ರಾಜ್ಯ ಸರಕಾರವೇ ಪ್ರತಿ ತಿಂಗಳು ಸ್ವಂತ ಖರ್ಚಿನಿಂದ ಪಡಿತರ ಪೂರೈಸುತ್ತಿದೆ. ಈ ಮಧ್ಯೆ ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಾಕಿ ಇವೆ. ಆದ್ದರಿಂದ ಅನರ್ಹರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದರೆ ಅಥವಾ ಈ ಹಿಂದೆ ಬಿಪಿಎಲ್‌ನಲ್ಲಿದ್ದು, ಈಗ ಬಡತನ ರೇಖೆಯಿಂದ ಮೇಲೆ ಬಂದಿರುವವರನ್ನು ಪತ್ತೆ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೆ, ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುನ್ನು ತೆಗೆದುಹಾಕಿದರೆ ಯೂನಿಟ್‌ಗಳು ತಗ್ಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಾಸಿಕ 60 ಕೋಟಿ ರೂ. ಹೆಚ್ಚುವರಿ ವೆಚ್ಚ
ಇಲಾಖೆ ನೀಡಿದ ಅಂಕಿ-ಅಂಶಗಳ ಪ್ರಕಾರ, ಕೇಂದ್ರ ನಿಗದಿಪಡಿಸಿದ ಮಿತಿಗಿಂತ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕುಟುಂಬಗಳಿದ್ದು, ಇದರ ಫಲಾನುಭವಿಗಳ ಸಂಖ್ಯೆ 34.68 ಲಕ್ಷ. ಪ್ರತಿಯೊಬ್ಬರಿಗೂ ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಕೆಜಿಗೆ 34 ರೂ. ಇದ್ದು, ಸರ್ಕಾರ ಇವರಿಗಾಗಿ ಪ್ರತಿ ತಿಂಗಳು ಅಂದಾಜು 60 ಕೋಟಿ ರೂ. ಭರಿಸುತ್ತಿದೆ. ಈಗ ಮತ್ತೆ ಅರ್ಜಿ ಹಾಕಿ 3.05 ಲಕ್ಷ ಕುಟುಂಬ ಬಿಪಿಎಲ್ ಕಾರ್ಡ್‌ಗಳಿಗಾಗಿವೆ ಅಂದರೆ ಇನ್ನೂ 12ರಿಂದ 13 ಲಕ್ಷ ಜನರ ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಲೆಕ್ಕಹಾಕಿದ್ದಾರೆ.
ಪ್ರತಿ ತಿಂಗಳು ಒಟ್ಟಾರೆ ಬಿಪಿಎಲ್ ಕಾರ್ಡ್‌ದಾರರ ಪೈಕಿ ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಸೌಲ್ಯಭ್ಯ ಪಡೆಯುತ್ತಿವೆ. ಉಳಿದವು ಹಲವು ತಿಂಗಳುಗಳಿಂದ ಅತ್ತ ತಿರುಗಿಯೂ ನೋಡಿಲ್ಲ. ಈ ಹಿನ್ನೆಲೆಯಲ್ಲಿ ಸತತ ಮೂರು ತಿಂಗಳಿಂದ ಪಡಿತರ ತೆಗೆದುಕೊಳ್ಳಲು ಬಾರದ ಕಾರ್ಡ್‌ಗಳನ್ನು ಅಮಾನತುಗೊಳಿಸುವುದು, ಸತತ 6 ತಿಂಗಳು ಬಾರದಿದ್ದರೆ ಸಂಪೂರ್ಣ ರದ್ದುಗೊಳಿಸುವ ಆಯ್ಕೆಯೂ ಇಲಾಖೆ ಮುಂದಿದೆ.
ಈ ಮಧ್ಯೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಹಲವೆಡೆ ಸ್ಥಳೀಯ ಮಟ್ಟದಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಕಾರ್ಡ್‌ಗಳನ್ನು ಮಾಡಿಸಿಕೊಡುವುದಾಗಿ ಹೇಳಿಕೊಂಡು. ಒಂದೊಂದು ಕಾರ್ಡ್‌ಗೆ ಸಾವಿರಾರು ರೂಪಾಯಿ ಕಮಿಷನ್ ಪಡೆಯಲಾಗುತ್ತಿದೆ ಎಂದು ತಿಳಿದು ಬಂದಿದೆ
Post a comment
Log in to write reviews