ಪ್ಯಾರಿಸ್: ಫುಟ್ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಚಾಲನೆ ನೀಡಿದೆ. ಬುಧವಾರ ನಡೆದ ಮಹಾ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಈ ಪಂದ್ಯವು ವಿವಾದದಿಂದ ಎಲ್ಲರ ಗಮನ ಸೆಳೆದಿದೆ.
ಸ್ಟೇಡ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಉಭಯ ತಂಡಗಳ ನಡುವೆ ಕಂಡು ಬಂದ ಉತ್ತಮ ಪೈಪೋಟಿ ನಡುವೆ ಮೊರಾಕ್ಕೊ ತಂಡದ ಮುನ್ಪಡೆ ಆಟಗಾರ ಸೋಫಿಯಾನೆ ರಹೀಮಿ ಮೊದಲ ಗೋಲು ದಾಖಲಿಸಿದರು.
ಇದರ ಬೆನ್ನಲ್ಲೇ ಸಿಕ್ಕ ಪೆನಾಲ್ಟಿ ಶೂಟೌಟ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ರಹೀಮಿ ಯಶಸ್ವಿಯಾದರು. ಅದರಂತೆ ಮೊರಾಕ್ಕೊ ತಂಡವು 2-0 ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ ಅಂತಿಮ ಹಂತದಲ್ಲಿ ಅರ್ಜೆಂಟೀನಾ ಆಟಗಾರ ಸಿಮಿಯೋನ್ ಬಾರಿಸಿದ ಚೆಂಡು ಮೊರಾಕ್ಕೊ ಗೋಲ್ ಕೀಪರ್ ಅನ್ನು ವಂಚಿಸಿ ಬಲೆಯೊಳಗೆ ಸೇರಿತು. ಇದರೊಂದಿಗೆ ಪಂದ್ಯವು 2-1 ಗೋಲುಗಳ ಅಂತರಕ್ಕೇರಿತು. ಇದಾಗ್ಯೂ ಮೊರಾಕ್ಕೊ ತಂಡವು ಪಂದ್ಯ ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ 90 ನಿಮಿಷಗಳ ಪಂದ್ಯ ಮುಗಿದ ಬಳಿಕ ಮ್ಯಾಚ್ ರೆಫರಿ ಹೆಚ್ಚುವರಿ 15 ನಿಮಿಷಗಳ ಕಾಲ ಆಟವನ್ನು ಮುಂದುವರೆಸಿದರು.
ಹೆಚ್ಚುವರಿ ನಿಮಿಷದಲ್ಲಿ ಗೋಲು:
ಹೆಚ್ಚುವರಿಯಾಗಿ ನೀಡಲಾದ ಸಮಯದಲ್ಲಿ ಗೋಲು ದಾಖಲಿಸುವಲ್ಲಿ ಅರ್ಜೆಂಟೀನಾ ಯಶಸ್ವಿಯಾಯಿತು. ಇದರೊಂದಿಗೆ ಪಂದ್ಯವು 2-2 ಗೋಲುಗಳೊಂದಿಗೆ ಸಮಗೊಂಡಿತು. ಆದರೆ ಇಲ್ಲಿ ಮ್ಯಾಚ್ ರೆಫರಿ 15 ನಿಮಿಷಗಳ ಹೆಚ್ಚುವರಿ ಸಮಯ ನೀಡಿದಕ್ಕೆ ಮೊರಾಕ್ಕೊ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.
ಕೇವಲ ಐದಾರು ನಿಮಿಷಗಳಿಗೆ ಸೀಮಿತವಾಗಬೇಕಿದ್ದ ಹೆಚ್ಚುವರಿ ಸಮಯವನ್ನು ಮ್ಯಾಚ್ ರೆಫರಿ ಅರ್ಜೆಂಟೀನಾ ತಂಡಕ್ಕೆ ಅನುಕೂಲವಾಗಲೆಂದೇ 15 ನಿಮಿಷಗಳವರೆಗೆ ಕೊಂಡೊಯ್ದಿದ್ದಾರೆ ಎಂಬುದು ಮೊರಾಕ್ಕೊ ಅಭಿಮಾನಿಗಳ ವಾದವಾಗಿತ್ತು.
ಈ ವಾದದೊಂದಿಗೆ ಮೊರಾಕ್ಕೊ ಅಭಿಮಾನಿಗಳು ಸ್ಟೇಡಿಯಂನಲ್ಲಿ ದಾಂಧಲೆ ಆರಂಭಿಸಿದ್ದರು. ಕೆಲ ಅಭಿಮಾನಿಗಳು ಮೈದಾನಕ್ಕೆ ನುಗ್ಗುವ ಮೂಲಕ ಆಟಕ್ಕೆ ಅಡ್ಡಿಪಡಿಸಿದರು. ಇನ್ನು ಕೆಲವರು ಮೈದಾನಕ್ಕೆ ಪಟಾಕಿ ಬಿಟ್ಟು ಮತ್ತು ಬಾಟಲಿಗಳನ್ನು ಎಸೆದು ಅರ್ಜೆಂಟೀನಾ ಆಟಗಾರರನ್ನು ಗುರಿಯಾಗಿಸಿಕೊಂಡರು.
ಪಂದ್ಯ ಸ್ಥಗಿತ
ಮುಕ್ತಾಯಕ್ಕೆ ಕೇವಲ 3 ನಿಮಿಷಗಳಿರುವಾಗ ಕಂಡು ಬಂದ ಈ ದಾಂಧಲೆಯಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಅಲ್ಲದೆ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರಹೋಗುವಂತೆ ವಿಡಿಯೋ ಬೋರ್ಡ್‌ಗಳಲ್ಲಿ ಪ್ರಕಟಿಸಲಾಯಿತು. ಅಲ್ಲಿಗೆ ಅರ್ಜೆಂಟೀನಾ ಹಾಗೂ ಮೊರಾಕ್ಕೊ ಪಂದ್ಯವು ವಿವಾದದೊಂದಿಗೆ ಕೊನೆಗೊಂಡಿರುವರಿಂದ ಪುಟ್‌ಬಾಲ್ ಅಭಿಮಾನಿಗಳಲ್ಲಿ ಬೇಸರ ಮೂಡಿತು.
ಮುಗಿಯದ ವಿವಾದ
ಪಂದ್ಯ ಮುಗಿದರೂ ವಿವಾದ ಮಾತ್ರ ಮುಗಿದಿಲ್ಲ. ಪಂದ್ಯ ಸ್ಥಗಿತಗೊಳಿಸಿ 2 ಗಂಟೆಗಳ ಬಳಿಕ VAR ಪರಿಶೀಲಿಸಿ ತೀರ್ಪು ನೀಡಿರುವ ಮ್ಯಾಚ್ ರೆಫರಿಯ ನಿರ್ಧಾರದ ಬಗ್ಗೆ ಅರ್ಜೆಂಟೀನಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅತ್ತ ಅರ್ಜೆಂಟೀನಾ ತಂಡಕ್ಕೆ ಹೆಚ್ಚುವರಿ ನಿಮಿಷಗಳ ಮೂಲಕ ರೆಫರಿ ಪಂದ್ಯ ಗೆಲ್ಲಿಸಿಕೊಡಲು ಅನುಕೂಲ ಮಾಡಿಕೊಟ್ಟಿದ್ದರು ಎಂಬ ವಾದವನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನ ಮೊದಲ ಪಂದ್ಯ ವಿವಾದಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.
Post a comment
Log in to write reviews