ಕೋಝಿಕ್ಕೊಡ್: ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಬ್ರಾಂಚ್ನಲ್ಲಿ ಚಿನ್ನ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆಹಿಡಿಯುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಯಕುಮಾರ್ ಕಳೆದ ಮೂರು ವರ್ಷಗಳಿಂದ ವಡಕರ ಬ್ರಾಂಚ್ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಎರ್ನಾಕುಲಂನ ಪಲರಿವಟ್ಟಂ ಬ್ರಾಂಚ್ಗೆ ವರ್ಗಾವಣೆಗೊಂಡಿದ್ದರು. 2024ರ ಜೂನ್ 13ರಿಂದ ಜುಲೈ 6ರ ವರೆಗೆ ಗ್ರಾಹಕರು ಇರಿಸಲಾಗಿದ್ದ 42 ಖಾತೆಗಳಲ್ಲಿನ ಬಂಗಾರ ಕಣ್ಮರೆಯಾಗಿತ್ತು. ಈ ಪ್ರಕರಣ ಸಂಬಂದ ವಡಕರ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಹಕರು ಇರಿಸಿದ್ದ ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರವನ್ನು ಬ್ಯಾಂಕ್ನಲ್ಲಿ ಜಮೆಯಾಗಿಸುವ ಮೂಲಕ ಬ್ಯಾಂಕ್ಗೆ ಜಯಕುಮಾರ್ ವಂಚಿಸಿದ್ದರು. ತಮಿಳುನಾಡಿನಲ್ಲಿ ಮೆಟ್ಟುಪಾಳ್ಯಮ್ ಪತ್ತಿ ಸ್ಟ್ರೀಟ್ನ ನಿವಾಸಿಯಾಗಿರುವ ಜಯಕುಮಾರ್ ಕೃತ್ಯವು ಬ್ರಾಂಚ್ನ ಮರು ಮೌಲ್ಯಮಾಪನ ಪ್ರಕ್ರಿಯೆ ವೇಳೆ ಬಹಿರಂಗವಾಗಿತ್ತು. ಇತ್ತೀಚಿಗೆ ಬ್ಯಾಂಕ್ಗೆ ನೇಮಕಗೊಂಡಿದ್ದ ಹೊಸ ಮ್ಯಾನೇಜರ್ ವಿ ಇರ್ಷಾದ್ ಅವರು ಈ ಕೃತ್ಯವನ್ನು ಬಯಲಿಗೆಳೆದು ವಡಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದ. ಈತನ ಕುರಿತು ಇತರೆ ರಾಜ್ಯಗಳೊಂದಿಗೆ ಕೇರಳ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಹುಡುಕಾಟಕ್ಕೆ ಕೇರಳ ಪೊಲೀಸರು ನೆರವು ಕೋರಿದ್ದರು. ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ತೆಲಂಗಾಣದಲ್ಲಿ ಅವಿತಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಮಾತನಾಡಿರುವ ತೆಲಂಗಾಣ ಪೊಲೀಸರು, 34 ವರ್ಷದ ಜಯಕುಮಾರ್ನನ್ನು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಕೇರಳ ಪೊಲೀಸರ ಸೂಚನೆ ಮೇರೆಗೆ ಈ ಕ್ರಮ ನಡೆಸಲಾಗಿದೆ. ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದರು.
Post a comment
Log in to write reviews