ದೆಹಲಿ: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಗೌರವ ನಮನ ಸಲ್ಲಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕವು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಮೂಲಕ ಅವರು ಆ ದಿನಗಳಲ್ಲಿ ನೀರಾವರಿಗೆ ಕೊಟ್ಟ ವ್ಯವಸ್ಥೆ, ನಗರ ನಿರ್ಮಾಣಕ್ಕೆ ಕೊಟ್ಟ ಕೊಡುಗೆ, ಅವರ ದೂರದೃಷ್ಟಿಯನ್ನು ನೆನಪಿಸುತ್ತದೆ ಎಂದು ತಿಳಿಸಿದರು.
ಅವರ ಜೀವನ ನಮಗೆ ಪ್ರೇರಣೆ ಆಗಬೇಕು. ಆದರೆ, ದುರ್ದೈವದ ಸಂಗತಿ ಏನೆಂದರೆ ಈ ಸರಕಾರವು ಕೆಂಪೇಗೌಡರ ಪ್ರೇರಣೆ ಪಡೆಯುವ ಬದಲಾಗಿ ಒಂದು ಮನೆ ಕಟ್ಟುವ ಯೋಜನೆಗೆ ಅನುಮತಿ ಕೊಡಲು ಅಡಿಗೆ 100 ರೂ. ಎಂದು ನಿಗದಿಪಡಿಸಿದೆ ಎಂದು ಟೀಕಿಸಿದರು. ಹೀಗಾದರೆ ಕೆಂಪೇಗೌಡರ ಕನಸಿನ ಬೆಂಗಳೂರು ಉಳಿಯುವುದಿಲ್ಲ ಎಂದು ನುಡಿದರು.
ಕೆಂಪೇಗೌಡರ ಕನಸನ್ನು ನನಸಾಗಿಸಲು ದೂರದೃಷ್ಟಿ ಇರಬೇಕು. ಸರಕಾರದ ಕೆಲವರು ಇದರಲ್ಲೂ ರಾಜಕಾರಣ ಮಾಡಿರುವುದು ದುರದೃಷ್ಟಕರ. ಕರ್ನಾಟಕದಿಂದ ಒಬ್ಬರೇ ಒಬ್ಬ ಮಾಜಿ ಪ್ರಧಾನಿ ಇದ್ದಾರೆ. ಅವರ ಹೆಸರನ್ನೇ ಆಮಂತ್ರಣಪತ್ರದಲ್ಲಿ ಹಾಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕದಿಂದ ಒಬ್ಬರೇ ಮಾಜಿ ಪ್ರಧಾನಿ ಇರುವುದನ್ನು ಗಮನಿಸಬೇಕಿತ್ತು. ಸಾವಿರ ಜನರಿಲ್ಲ ಎಂದು ನುಡಿದರು.
ಕೆಲವು ಕೇಂದ್ರ ಸಚಿವರನ್ನು ಕರೆದಿದ್ದಾರೆ. ಇನ್ನೂ ಕೆಲವರನ್ನು ಬಿಟ್ಟಿದ್ದಾರೆ. ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ಸಣ್ಣತನದ ರಾಜಕಾರಣ ಮಾಡಿರುವುದು ದುರದೃಷ್ಟಕರ. ಈ ಸಣ್ಣತನದ ರಾಜಕಾರಣದಿಂದ ಯಾರಾದರೂ ದೊಡ್ಡವರಾಗುವುದಾಗಿ ಭಾವಿಸಿದ್ದರೆ, ಸಣ್ಣ ರಾಜಕಾರಣದಿಂದ ಯಾರೂ ದೊಡ್ಡವರಾಗುವುದಿಲ್ಲ. ಇನ್ನಷ್ಟು ಸಣ್ಣವರಾಗುತ್ತಾರೆ. ಈ ಸಣ್ಣತನ ಬಿಟ್ಟು ಕೆಂಪೇಗೌಡರ ಮಾದರಿಯಲ್ಲಿ ಆಡಳಿತ ನಡೆಸಿ ಎಂದು ಕಿವಿಮಾತು ಹೇಳಿದರು.
Post a comment
Log in to write reviews