ಬಂಗಾಳ ಕೊಲ್ಲಿಯಲ್ಲಿ ಎದ್ದ ರೆಮಲ್ ಚಂಡಮಾರುತ ಯಾವುದೇ ಸಂದರ್ಭದಲ್ಲಿ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬಾಂಗ್ಲಾದೇಶ ಸರ್ಕಾರ ಸ್ಥಳಾಂತರಿಸಿದೆ.
ರೆಮಾಲ್ ಚಂಡಮಾರುತ ಗಂಟೆಗೆ 135 ಕಿ.ಮೀ ವೇಗದಲ್ಲಿ ಬಾಂಗ್ಲಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಹೆಚ್ಚಿನ ಅನಾಹುತ ತಡೆಯಲು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ಭಾನುವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ದೇಶದ ಕರಾವಳಿಯ ಮೇಲಿಂದ ದಾಟಲಿದೆ ಎಂದು ಸುದ್ದಿ ಸಂಸ್ಥೆಯನ್ನು ವರದಿ ಮಾಡಿದೆ. ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದ ಅಪಾಯಗಳ ಬಗ್ಗೆ ಬಾಂಗ್ಲಾ ಹವಾಮಾನ ಇಲಾಖೆ ಭಾನುವಾರ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಪೂರ್ವ ಮುಂಗಾರಿನ ಮೊದಲ ಚಂಡಮಾರುತ ಭಾರತದ 8 ರಾಜ್ಯಗಳಲ್ಲಿ ಭಾರಿ ಅನಾಹುತ ಸೃಷ್ಟಿಸುವ ಭೀತಿಯನ್ನು ಉಂಟುಮಾಡಿದೆ. ಪೂರ್ವ ಕರಾವಳಿ ಭಾಗವಾದ ಪಶ್ಚಿಮ ಬಂಗಾಳ, ಒಡಿಸ್ಸಾ, ಆಂದ್ರಪ್ರದೇಶದ, ಅಸ್ಸಾಂ, ಮೇಘಾಲಯ ಸೇರಿದಂತೆ 8 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಭಾರಿ ನಷ್ಟವಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ವಿಮಾನ ಸಂಚಾರ ಕೂಡ ಬಂದ್ ಮಾಡಲಾಗಿದೆ. ಚಂಡಮಾರುತ ಹೊಡೆತಕ್ಕೆ ಪಶ್ಚಿಮ ಬಂಗಾಳ ಜನಜೀವನ ತತ್ತರಿಸಿ ಹೋಗಿದೆ. ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ 14 ಎನ್ ಡಿ ಆರ್ ಎಫ್ ತಂಡ ಮತ್ತು ಎಸ್ ಡಿ ಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ.
ಮುಂಗಾರು ಮಳೆಗೆ ಹೊಡೆತ?
ರೆಮಲ್ ಚಂಡಮಾರುತದಿಂದ ಭಾತರ ದೇಶದಲ್ಲಿ ಮುಂಗಾರು ಮೋಡಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಷ್ಟ್ರೀಯ ಹವಾಮಾನ ಇಲಾಖೆಯ ಪ್ರಕಾರ ಮೇ.31 ಕ್ಕೆ ಕೇರಳದ ಮೂಲಕ ಮುಂಗಾರು ಮಳೆ ಆರಂಭವಾಗಲಿರುವ ಮುನ್ಸೂಚನೆ ಇತ್ತು. ಇತ್ತ ಪೂರ್ವ ಕರಾವಳಿಯಲ್ಲಿ ರೆಮಲ್ ಚಂಡಮಾರುತ ಜೋರಾಗಿದ್ದರಿಂದ ಇದು ಮುಂಗಾರು ಮೋಡಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆಯನ್ನು ಇಲಾಖೆ ನೀಡಿದ್ದರೂ, ಈಗಿನ ಚಂಡ ಮಾರುತದ ಪ್ರತಿಕೂಲವಾಗಿ ಕಾಡಲಿದೆ ಎನ್ನಲಾಗಿದೆ.
Post a comment
Log in to write reviews